ಇಲ್ಲಿಯ ತಹಸೀಲ್ದಾರ ಕಚೇರಿಯಲ್ಲಿ ಸೋಮವಾರ ಪ್ರಭಾರ ತಹಶೀಲ್ದಾರ ಪ್ರವೀಣ್ ಕಾರಂಡೆ ಅಧ್ಯಕ್ಷತೆಯಲ್ಲಿ 2026ನೇ ಸಾಲಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

ಅಧಿಕಾರಿಗಳೊಂದಿಗೆ ಸಭೆ । ಭಟ್ಕಳದಲ್ಲಿ ಪೊಲೀಯೋ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಲು ತಹಸೀಲ್ದಾರ ಸೂಚನೆ

ಕನ್ನಡಪ್ರಭ ವಾರ್ತೆ ಭಟ್ಕಳ

ಇಲ್ಲಿಯ ತಹಸೀಲ್ದಾರ ಕಚೇರಿಯಲ್ಲಿ ಸೋಮವಾರ ಪ್ರಭಾರ ತಹಶೀಲ್ದಾರ ಪ್ರವೀಣ್ ಕಾರಂಡೆ ಅಧ್ಯಕ್ಷತೆಯಲ್ಲಿ 2026ನೇ ಸಾಲಿನ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಮಕ್ಕಳನ್ನು ಪೋಲಿಯೋ ರೋಗದಿಂದ ಸಂಪೂರ್ಣ ರಕ್ಷಿಸುವ ಉದ್ದೇಶದಿಂದ ಜಾರಿಗೊಳಿಸಲಾಗುತ್ತಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ಸಿಗೆ ಸರ್ವ ಇಲಾಖೆಗಳ ಸಮನ್ವಯ ಮತ್ತು ಸಹಕಾರ ಅಗತ್ಯವಾಗಿದೆ. ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲ ಸಂಬಂಧಿತ ಇಲಾಖೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜನಜಾಗೃತಿ ಮೂಡಿಸಿ, ಪೋಷಕರಲ್ಲಿ ಅರಿವು ಹೆಚ್ಚಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಇದೇ ಸಂದರ್ಭ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಸದಸ್ಯರನ್ನು ಒಳಗೊಂಡ ಚಾಲನಾ ಸಮಿತಿಯ ಎರಡನೇ ಸುತ್ತಿನ ಸಭೆಯಲ್ಲಿ ಕಾರ್ಯಕ್ರಮದ ಸಿದ್ಧತೆಗಳು, ಗುರಿ ಹಾಗೂ ಕಾರ್ಯಯೋಜನೆ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಸನಾ ಪಟೇಲ್ ಪವರ್‌ಪಾಯಿಂಟ್‌ ಪ್ರಸ್ತುತಿಯ ಮೂಲಕ ಕಾರ್ಯಕ್ರಮದ ವಿವರ ಮಂಡಿಸಿದರು.

ಭಟ್ಕಳ ತಾಲೂಕಿನಲ್ಲಿ 0ರಿಂದ 5 ವರ್ಷದೊಳಗಿನ ಒಟ್ಟು 13,549 ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡುವ ಗುರಿ ಹೊಂದಲಾಗಿದೆ. ಈ ಕಾರ್ಯಕ್ಕಾಗಿ ತಾಲೂಕಿನಲ್ಲಿ 95 ಲಸಿಕಾ ಕೇಂದ್ರ ಸ್ಥಾಪಿಸಲಾಗಿದ್ದು, 388 ವ್ಯಾಕ್ಸಿನೇಟರ್‌ಗಳು ಹಾಗೂ 19 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದರು.

ಶೇ.100ರಷ್ಟು ಗುರಿ ಸಾಧಿಸಲು ಶಾಲೆಗಳು, ಅಂಗನವಾಡಿ ಕೇಂದ್ರಗಳು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಸಂಸ್ಥೆಗಳು ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ವಿಶೇಷವಾಗಿ ದೂರದ ಗ್ರಾಮಗಳು ಹಾಗೂ ವಲಸೆ ಕಾರ್ಮಿಕರ ಮಕ್ಕಳಿಗೂ ಲಸಿಕೆ ತಲುಪುವಂತೆ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಯಿತು.

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಚಾಲನಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು. ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸ ಆರ್. ಸ್ವಾಗತಿಸಿದರು.