ಸಾರಾಂಶ
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ, ಕಾನೂನು ಅರಿವು ನೆರವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕನಕಗಿರಿಕಾನೂನಿಗೆ ಯಾರೂ ಭಯಪಡುವ ಅವಶ್ಯಕತೆ ಇಲ್ಲ. ಅದರ ತಿಳುವಳಿಕೆಯ ಅಗತ್ಯವಿದೆ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.ಪಟ್ಟಣದ ಚನ್ನಶ್ರೀ ರುದ್ರ ಪಿಯು ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ, ಕಂದಾಯ, ಪೊಲೀಸ್ ಹಾಗೂ ಶ್ರೀರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು.1995ರ ನ. 9ರಂದು ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ ಆರಂಭಗೊಂಡಿದೆ. ಈ ವಿಶೇಷ ಕಾಯಿದೆಯನ್ನು 1987ರಲ್ಲಿ ಜಾರಿಗೆ ತರಲಾಗಿದೆ, ಆದರೂ ಎಲ್ಲ ನ್ಯಾಯಾಲಯಗಳಲ್ಲಿ ಅನ್ವಯವಾಗಿರಲಿಲ್ಲ. ಇತ್ತೀಚೆಗೆ ತಾಲೂಕು, ಜಿಲ್ಲೆ, ರಾಜ್ಯ ರಾಗೂ ರಾಷ್ಟ್ರೀಯ ನ್ಯಾಯಾಲಯಗಳಲ್ಲಿ ಪ್ರಾಧಿಕಾರದ ಮೂಲಕ ಬಡವರ ಹಾಗೂ ದುರ್ಬಲರಿಗೆ ನ್ಯಾಯ ಒದಗಿಸುತ್ತಿದೆ. ಆರ್ಥಿಕವಾಗಿ ದುರ್ಬಲರಾದವರಿಗೆ ₹ ಮೂರು ಲಕ್ಷಕ್ಕಿಂತ ಆದಾಯ ಕಡಿಮೆಯಿರುವ, ಎಸ್ಸಿ, ಎಸ್ಟಿ ಜನಾಂಗದವರಿಗೆ, ಬುದ್ಧಿಮಾಂದ್ಯ ಹಾಗೂ ಅಂಗವಿಕಲರಿಗೆ ಕಾನೂನು ಸೇವೆಗಳ ಪ್ರಾಧಿಕಾರವು ನೆರವಾಗುತ್ತಿದೆ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ ಮಾತನಾಡಿ, ರೈತರು ತಮ್ಮ ಭೂಮಿಗೆ ಸಂಬಂಧಿಸಿದ ಆರ್ ಟಿಸಿ ದಾಖಲೆಯನ್ನು ಆಗಾಗ್ಗೆ ಪರಿಶೀಲಿಸುವಂತಾಗಬೇಕು. ಇಲ್ಲವಾದರೆ ಯಾವುದಾದರೂ ಸಮಸ್ಯೆಗೆ ಗುರಿಯಾಗುವ ಸಾಧ್ಯತೆಗಳಿವೆ. ಬಾಲಕಿಯರ ಹಾಗೂ ವಿದ್ಯಾರ್ಥಿನಿಯರ ರಕ್ಷಣೆಗೆ ಪೋಕ್ಸೋ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರ ಮೇಲೆ ಅಸಭ್ಯವಾಗಿ ವರ್ತಿಸುವುದು, ಚುಡಾಯಿಸುವುದು ಕಾನೂನು ಬಾಹಿರವಾಗಿದ್ದು, ಅಂತವರ ವಿರುದ್ಧ ಪೋಕ್ಸೋ ಕಾಯಿದೆಯಡಿ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. 18 ವರ್ಷದೊಳಗಿನ ಮಕ್ಕಳು ದ್ವಿಚಕ್ರ ವಾಹನ ಚಲಾಯಿಸುವುದು ಅಪರಾಧವಾಗಿದೆ. ಪ್ರತಿಯೊಬ್ಬರಿಗೂ ಕಾನೂನು ಪ್ರಾಧಿಕಾರ ನೆರವಾಗಿದೆ ಎಂದರು.
ಹಿರಿಯ ವಕೀಲ ವಿ.ಎನ್. ಪಾಟೀಲ್ ರಾಷ್ಟ್ರೀಯ ಕಾನೂನು ಸೇವೆಗಳ ಕುರಿತು ಉಪನ್ಯಾಸ ನೀಡಿದರು.ರುದ್ರಸ್ವಾಮಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಬಸವರಾಜ ಗುಗ್ಗಳಶೆಟ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚನ್ನಶ್ರೀ ರುದ್ರ ಪಿಯು ಕಾಲೇಜಿನ ಪ್ರಾಂಶುಪಾಲ ನಿರುಪಾದಿ, ಮುಖ್ಯೋಪಾಧ್ಯಾಯರಾದ ಶಶಿಕಲಾ, ಮಂಗಳಾ ಸಜ್ಜನ, ಮುಖಂಡ ಪ್ರಶಾಂತ ಪ್ರಭುಶೆಟ್ಟರ ಇತರರು ಇದ್ದರು.