ನರೇಗಾ ಕಾರ್ಮಿಕರು ಡಿಜಿಟಲ್‌ ತಂತ್ರಜ್ಞಾನದ ಲಾಭ ಪಡೆಯಲಿ: ಸಂದೀಪ ಕೋಠಾರಕರ

| Published : Oct 30 2024, 12:40 AM IST

ನರೇಗಾ ಕಾರ್ಮಿಕರು ಡಿಜಿಟಲ್‌ ತಂತ್ರಜ್ಞಾನದ ಲಾಭ ಪಡೆಯಲಿ: ಸಂದೀಪ ಕೋಠಾರಕರ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕರು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡುವ ಮೂಲಕ ಆರ್ಜಿ ಸಲ್ಲಿಸಿ ನರೇಗಾದಡಿ ಸಿಗುವ ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು.

ಕಾರವಾರ: ಈ ಬಾರಿ ನರೇಗಾಕ್ಕೆ ಡಿಜಿಟಲ್ ತಂತ್ರಜ್ಞಾನ ಅಳವಡಿಸಿ ಕ್ಯೂಆರ್‌ ಕೋಡ್‌ ಅಭಿವೃದ್ಧಿಪಡಿಸಿದೆ. ಕಾರ್ಮಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಇಲ್ಲಿನ ತಾಪಂ ನರೇಗಾ ಸಹಾಯಕ ನಿರ್ದೇಶಕ ಸಂದೀಪ ಕೋಠಾರಕರ ತಿಳಿಸಿದರು.

ತಾಲೂಕಿನ ಚಂಡಿಯಾ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಾದ ನ್ಯಾಯಬೆಲೆ ಅಂಗಡಿ, ಬ್ಯಾಂಕ್, ಬಸ್ ನಿಲ್ದಾಣ, ಗ್ರಾಮ ಒನ್ ಕೇಂದ್ರದ ಮುಂಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ ಅಭಿಯಾನದಲ್ಲಿ ನರೇಗಾ ಮಾಹಿತಿ ಹಾಗೂ ಕ್ಯೂ ಆರ್‌ ಕೋಡ್‌ಯುಳ್ಳ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಯೊಬ್ಬ ನಾಗರಿಕರು ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್ ಮಾಡುವ ಮೂಲಕ ಆರ್ಜಿ ಸಲ್ಲಿಸಿ ನರೇಗಾದಡಿ ಸಿಗುವ ಕೂಲಿ ಕೆಲಸ ಹಾಗೂ ವೈಯಕ್ತಿಕ ಕಾಮಗಾರಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ತಾಲೂಕಿನ ಗ್ರಾಪಂಗಳ ವ್ಯಾಪ್ತಿಯ ಪ್ರತಿಯೊಂದು ಹಳ್ಳಿಗಳ ಜನಸಾಮಾನ್ಯರು ಹಾಗೂ ಸ್ವ- ಸಹಾಯ ಸಂಘದ ಮಹಿಳೆಯರು ಮಹಾತ್ಮ ಗಾಂಧಿ ನರೇಗಾದಡಿ ಲಭ್ಯವಿರುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ತೆಗೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಅದಕ್ಕಾಗಿ ಎಲ್ಲರೂ ಡಿಜಿಟಲ್ ಸ್ಕ್ಯಾನ್ ಮೂಲಕ ಅರ್ಜಿ ಸಲ್ಲಿಸಬೇಕು. ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ಆಧರಿಸಿ ಮುಂದಿನ ವರ್ಷದ ಕ್ರಿಯಾಯೋಜನೆಯಲ್ಲಿ ಅವರ ಹೆಸರು ಸೇರಿಸಲಾಗುವುದು ಎಂದರು.

ಜಿಪಂ ಜಿಲ್ಲಾ ಐಇಸಿ ಸಂಯೋಜಕ ಫಕೀರಪ್ಪ ತುಮ್ಮಣ್ಣನವರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜನಿಸಿ ಮಗುವಿನಿಂದ ಹಿಡಿದು ವಯಸ್ಸಾದ ವೃದ್ಧರವರೆಗೂ ಸ್ಮಾರ್ಟ್ ಫೋನ್ ಬಳಸಲಾಗುತ್ತಿದೆ. ಇದನ್ನು ಮನಗಂಡ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ನರೇಗಾ ಯೋಜನೆಯಡಿ ಜನಸಾಮಾನ್ಯರಿಗೆ ಅಗತ್ಯವಿರುವ ಕಾಮಗಾರಿ ಹಾಗೂ ಕೂಲಿ ಕೆಲಸ ಪಡೆಯಲು ಡಿಜಿಟಲ್‌ ತಂತ್ರಜ್ಞಾನದ ಸ್ಪರ್ಶ ನೀಡಿದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಬಳಸಿ ಆನ್‌ಲೈನ್‌‌ನಲ್ಲಿ ಕ್ಯೂ ಆರ್‌ ಕೋಡ್‌ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಇದೇ ವೇಳೆ ಸಾರ್ವಜನಿಕ ಸ್ಥಳಗಳಾದ ನ್ಯಾಯಬೆಲೆ ಅಂಗಡಿ, ಬ್ಯಾಂಕ್, ಬಸ್ ನಿಲ್ದಾಣ, ಗ್ರಾಮ ಒನ್ ಕೇಂದ್ರದ ಮುಂಭಾಗದಲ್ಲಿ ನರೇಗಾ ಮಾಹಿತಿ ಹಾಗೂ ಕ್ಯೂ ಆರ್‌ ಕೋಡ್‌ಯುಳ್ಳ ಕರಪತ್ರಗಳನ್ನು ಅಂಟಿಸುವುದು ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಪೂಜಾ ನಾಯ್ಕ, ಉಪಾಧ್ಯಕ್ಷ ಜ್ಯೋಗಿ ಗುನಗಿ, ಪಿಡಿಒ ಮಂಜುನಾಥ ಟಿ.ಸಿ., ತಾಪಂ ತಾಂತ್ರಿಕ ಸಂಯೋಜಕ ಸೂರಜ ಗುನಗಿ, ತಾಂತ್ರಿಕ ಸಹಾಯಕ ಅಭಿಯಂತರ ಪ್ರಕಾಶ ನಾಯ್ಕ ಮೊದಲಾದವರು ಇದ್ದರು.