ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯಡಿಯಲ್ಲಿರುವ ೧೧ ಮಸೀದಿಗಳ ನವೀಕರಣ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ ದಾಂಡೇಲಿ

೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಮಂಜೂರಾದ ದಾಂಡೇಲಿಯ ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯ ಅಡಿಯಲ್ಲಿರುವ ೧೧ ಮಸೀದಿಗಳ ನವೀಕರಣ ಕಾಮಗಾರಿಗೆ ನಗರದ ಬಾಂಬೆಜಾಳದಲ್ಲಿ ಶಾಸಕ ಆರ್.ವಿ. ದೇಶಪಾಂಡೆ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಅವರು, ಭೂಮಿಯಲ್ಲಿ ಹುಟ್ಟಿದ ಮನುಷ್ಯರೆಲ್ಲರೂ ಒಂದೇ. ನನಗೆ ಎಲ್ಲ ಧರ್ಮ ಬಾಂಧವರು ಒಂದಾಗಿಯೇ ಕಾಣುತ್ತಾರೆ. ಜಾತಿ-ಜಾತಿಗಳ ನಡುವೆ, ಧರ್ಮ- ಧರ್ಮಗಳ ನಡುವೆ ಬಡಿದಾಡಿಕೊಳ್ಳುವುದರ ಬದಲು ಸರ್ವಧರ್ಮ ಸಮನ್ವಯತೆಯ ಬದುಕನ್ನು ನಾವು ಕಟ್ಟಿಕೊಂಡಾಗ ಮಾನವನಾಗಿ ಹುಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ ಇದರ ನಡುವೆ ಇರುವ ಮೂರು ದಿನದ ಬದುಕಿನಲ್ಲಿ ನಮ್ಮ ಜೀವನ ಸಮಾಜಮುಖಿಯಾಗಿರಬೇಕು. ನಮ್ಮ ಕೈಗಳು ದಾನದ ಕೈಗಳಾಗಬೇಕು. ಸಂಕಷ್ಟದಲ್ಲಿರುವ, ಕಷ್ಟದಲ್ಲಿರುವವರ ಸಮಸ್ಯೆಗಳಿಗೆ ಸಂದಿಸುವ ಮನೋಭಾವನೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದರು. ಅಂಜುಮನ್ ಮಸೀದಿಗಳ ನವೀಕರಣಕ್ಕೆ ₹೧.೧೫ ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. ನವೀಕರಣಕ್ಕಾಗಿ ಸಾಕಷ್ಟು ಅನುದಾನಗಳನ್ನು ಮಂಜೂರು ಮಾಡಿಸಿಕೊಟ್ಟಿದ್ದೇನೆ. ಇದು ನನ್ನ ಕರ್ತವ್ಯವೂ ಹೌದು, ೧೧ ಮಸೀದಿಗಳ ನವೀಕರಣ ಕಾಮಗಾರಿಯು ಗುಣಮಟ್ಟದಿಂದ ನಡೆಯಬೇಕೆಂದು ಹೇಳಿ, ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ. ದೇವಸ್ಥಾನ, ಮಸೀದಿ, ಮಂದಿರ ಅಭಿವೃದ್ದಿ ಕೈಗೊಳ್ಳುವುದು ಎಂದ ಅವರು, ಶಿಕ್ಷಣಕ್ಕೆ ಎಲ್ಲರೂ ಹೆಚ್ಚಿನ ಒತ್ತು ಕೊಡುವ ಮೂಲಕ ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣವಂತರನ್ನಾಗಿಸಬೇಕೆಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಕ್ಸಾಲ್ ಶೇಖ, ನಮ್ಮ ಮನವಿಗೆ ಸ್ಪಂದಿಸಿದ ದೇಶಪಾಂಡೆಯವರು ಸಾಕಷ್ಟು ಅನುದಾನ ತಂದಿದ್ದಾರೆ. ಈ ಬಾರಿ ಅತಿ ಹೆಚ್ಚು ಅನುದಾನವನ್ನು ತಂದುಕೊಟ್ಟ ಕೀರ್ತಿ ದೇಶಪಾಂಡೆಯವರಿಗೆ ಸಲ್ಲಬೇಕು. ಇಂತಹ ಜನ ನಾಯಕರನ್ನು ಪಡೆದ ಕ್ಷೇತ್ರದ ಜನತೆ ನಿಜಕ್ಕೂ ಧನ್ಯವಂತರು ಎಂದರು. ನಮ್ಮ ಮನವಿಗೆ ಸ್ಪಂದಿಸಿ ಮುಸ್ಲಿಂ ಸಮಾಜಕ್ಕಾಗಿ ಶವ ಸಾಗಿಸುವ ಅತ್ಯಾಧುನಿಕ ವಾಹನವನ್ನು ಕೂಡ ಮಂಜೂರು ಮಾಡಿಕೊಟ್ಟಿದ್ದು. ಸದ್ಯದಲ್ಲೇ ಅದರ ಸೇವೆ ಲೋಕಾರ್ಪಣೆಯಾಗಲಿದೆ ಆರ್.ವಿ.ದೇಶಪಾಂಡೆಯವರ ಸಹಕಾರ ಮಾರ್ಗದರ್ಶನವನ್ನು ನಮ್ಮ ಸಮಾಜ ಸದಾ ಸ್ಮರಿಸಿಕೊಳ್ಳುತ್ತದೆ ಎಂದರು.

ನಗರಸಭೆಯ ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯ ಪರವಾಗಿ ಆರ್.ವಿ. ದೇಶಪಾಂಡೆಯವರನ್ನು ಸನ್ಮಾನಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಅಷ್ಟಾಕ ಶೇಖ, ಅಂಜುಮನ್ ಅಹಲ್ಲೆ ಸುನ್ನತ್ ಸಂಸ್ಥೆಯ ಅಧ್ಯಕ್ಷ ನವಾಜ ಕರೀಂ ಖಾನ್, ಉಪಾಧ್ಯಕ್ಷ ಗೌಸ್ ಖತೀಬ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಪ್ರಮುಖರಾದ ಮುನ್ನಾ ವಹಾಬ್, ಅಬ್ದುಲ್ ಮಜೀದ್ ಸನದಿ, ಅಬ್ದುಲ್ ಹಮೀದ ಅತ್ತಾರ ಮೊದಲಾದವರಿದ್ದರು.