ಹಳಿಯಾಳ ಪಟ್ಟಣದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ನಡೆಯಿತು. ಧಾರವಾಡದ ಪ್ರೆಸ್ಟೀಜ್ ಇನ್‌ಸ್ಟಿಟ್ಯೂಟ್ ವತಿಯಿಂದ 60 ಬೈಕ್ ಸವಾರರಿಗೆ ಹೆಲ್ಮೆಟ್ ವಿತರಿಸಲಾಯಿತು.
ಹಳಿಯಾಳ: ನಮ್ಮ ಸುರಕ್ಷತೆಯು ಇತರರ ಸುರಕ್ಷತೆಗೆ ಅವಕಾಶ ನೀಡಲಿ ಎಂದು ಹಳಿಯಾಳ ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ ಹೇಳಿದರು.
ಗುರುವಾರ ಪಟ್ಟಣದಲ್ಲಿ ಧಾರವಾಡದ ಪ್ರೆಸ್ಟೀಜ್ ಇನ್‌ಸ್ಟಿಟ್ಯೂಟ್ ಹಾಗೂ ಹಳಿಯಾಳ ಪೊಲೀಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅವಸರ ಯಾವತ್ತೂ ಅಪಾಯ ತಂದೊಡಬಲ್ಲದೆಂಬ ಸತ್ಯವನ್ನು ಮರೆಯದಿರಿ, ವಾಹನ ಚಲಾಯಿಸುವಾಗ ನಿಮ್ಮನ್ನು ನಂಬಿ ಮನೆಯಲ್ಲಿ ಎಷ್ಟು ಜನರಿದ್ದಾರೆ, ಎಷ್ಟು ಜನ ನಂಬಿ ಬದುಕು ನಡೆಸುತ್ತಿದ್ದಾರೆ ಎಂಬುದನ್ನು ಮರೆಯಬೇಡಿ ಎಂದು ಹೇಳಿದರು.
ಶಾಲಾ-ಕಾಲೇಜುಗಳ ಬಳಿ ನಿಧಾನವಾಗಿ ವಾಹನಗಳನ್ನು ಚಲಾಯಿಸುವ ಮೂಲಕ ವಿದ್ಯಾರ್ಥಿಗಳ ಸಂರಕ್ಷಿಸುವ ಹೊಣೆಗಾರಿಕೆ ಚಾಲಕರ ಮೇಲಿದೆ. ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಬೇಕು. ಅಪಘಾತ ಸಂಭವಿಸಿದಾಗ ಜೀವರಕ್ಷಣೆಗೆ ಮೊದಲು ಗಮನಹರಿಸಿರಿ ಎಂದ ಅವರು, ರಸ್ತೆಯಲ್ಲಿ ಓಡಾಡುವಾಗ ಹಾಗೂ ವಾಹನ ಚಲಾಯಿಸುವಾಗ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ನಿಮ್ಮ ಹಾಗೂ ಸಾರ್ವಜನಿಕರ ಜೀವ ಉಳಿಸಿಕೊಳ್ಳಿ, ಆದಷ್ಟು ಅಪಘಾತಗಳನ್ನು ತಪ್ಪಿಸಿ ಎಂದು ಹೇಳಿದರು.ಪ್ರೆಸ್ಟೀಜ್ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಆನೆಗುಂದಿ ಪ್ರಾಸ್ತಾವಿಕವಾಗಿ ಮಾತನಾಡಿ, ರಸ್ತೆ ಸುರಕ್ಷತೆ ಜತೆಯಲ್ಲಿ ತಮ್ಮ ಸಂಸ್ಥೆಯ ವತಿಯಿಂದ ಉಚಿತವಾಗಿ 66 ಹೆಲ್ಮೆಟ್ ವಿತರಿಸಲಾಗುತ್ತಿದೆ ಎಂದರು. ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ, ಪಿಎಸ್‌ಐ ಬಸವರಾಜ ಮಬನೂರ ಹಾಗೂ ಸಿಬ್ಬಂದಿ ಇದ್ದರು.
ಸಭಾ ಕಾರ್ಯಕ್ರಮದ ನಂತರ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳಿಂದ ಹಾಗೂ ವಿ.ಡಿ. ಹೆಗಡೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪಟ್ಟಣದಲ್ಲಿ ಸುರಕ್ಷತಾ ಅಭಿಯಾನ ಜನಜಾಗ್ರತಿ ರ‍್ಯಾಲಿ ನಡೆಸಲಾಯಿತು.ಶಿವಾಜಿ ವೃತ್ತದಲ್ಲಿ ನಡೆದ ಸುರಕ್ಷತಾ ಅಭಿಯಾನದ ಮುಕ್ತಾಯ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸುನೀಲ ಹೆಗಡೆ ಅವರು ಪ್ರೆಸ್ಟೀಜ್ ಇನ್‌ಸ್ಟಿಟ್ಯೂಟ್ ವತಿಯಿಂದ 60 ಬೈಕ್ ಚಾಲಕರಿಗೆ ಹೆಲ್ಮೆಟ್ ಉಚಿತವಾಗಿ ವಿತರಿಸಿ, ರಸ್ತೆ ಸುರಕ್ಷತೆಯ ಕುರಿತು ಮನವರಿಕೆ ಮಾಡಿದರು.
ಪ್ರೆಸ್ಟೀಜ್ ಇನ್‌ಸ್ಟಿಟ್ಯೂಟ್‌ನ ರುಬಿಯಾ ಮಕಾನದಾರ, ಪ್ರೊ. ಎಂ.ಎಂ. ಖಾನ್, ಪ್ರೊ. ಅಜಿತ್ ಗೋಡ್ಕಿಂಡಿ, ಕಾರ್ಯಾಲಯದ ರಹೀಮಾ, ರುಖೈಯಾ ಸುಧಾ, ಬೆಂಗಳೂರಿನ ಹೋಂಡಾ ಟು ವೀಲರ್ ಕಂಪನಿಯ ಸೆಪ್ಟಿ (ಸುರಕ್ಷತಾ) ವಿಭಾಗದ ಮ್ಯಾನೇಜರ್ ವಿನಾಯಕ್ ಸವಟಗಿ ಹಾಗೂ ಜನಪ್ರತಿನಿಧಿಗಳಾದ ಸಂತೋಷ ಘಟಕಕಾಂಬ್ಳೆ, ಶ್ರೀನಿವಾಸ ದೊಡ್ಮಣಿ ಹಾಗೂ ಇತರರು ಇದ್ದರು.