ಪಂಚ ಗ್ಯಾರಂಟಿ ಯೋಜನೆ ಸಮರ್ಪಕ ಅನುಷ್ಠಾನವಾಗಲಿ

| Published : Nov 16 2024, 12:31 AM IST

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಯ ಇಲಾಖೆಯ ಅಧಿಕಾರಿಗಳು ಅರ್ಹರಿಗೆ ಯೋಜನೆ ಮುಟ್ಟಿಸುವ ಕೆಲಸ ಮಾಡಲಿ

ಲಕ್ಷ್ಮೇಶ್ವರ: ಸರ್ಕಾರದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಪಂಚ ಗ್ಯಾರಂಟಿ ಜಾರಿ ಸಮರ್ಪಕವಾಗಿ ಅನುಷ್ಠಾನವಾಗಿ ಜನರಿಗೆ ತಲುಪಲಿ, ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಶ್ರಮ ವಹಿಸಿದ್ದು, ತಾಲೂಕಿನಲ್ಲಿ ಎಲ್ಲ ಗ್ಯಾರಂಟಿ ಯೋಜನೆಗಳು ಅಧಿಕ ಪ್ರಮಾಣದಲ್ಲಿ ಪ್ರಗತಿಯಾಗಿದೆ ಎಂದು ತಾಲೂಕು ಪಂಚ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.

ಶುಕ್ರವಾರ ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿದರು.

ಪಂಚ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಯ ಇಲಾಖೆಯ ಅಧಿಕಾರಿಗಳು ಅರ್ಹರಿಗೆ ಯೋಜನೆ ಮುಟ್ಟಿಸುವ ಕೆಲಸ ಮಾಡಲಿ. ಪಂಚ ಗ್ಯಾರಂಟಿ ಯೋಜನೆ ಜನರಿಗೆ ಸಂಪೂರ್ಣವಾಗಿ ಮುಟ್ಟಿಸುವ ಕೆಲಸ ಆಗಬೇಕು. ಸಮಿತಿ ಸದಸ್ಯರು, ಅಧಿಕಾರಿಗಳು, ಎಲ್ಲರೂ ಸೇರಿ ಗ್ರಾಪಂ ಮಟ್ಟದಲ್ಲಿ ಹೋಗಿ ಜಾಗೃತಿ ಮೂಡಿಸಿ ಅರ್ಹರಿಗೆ ಗ್ಯಾರಂಟಿ ಯೋಜನೆ ಮುಟ್ಟಿಸುವ ಕೆಲಸ ಮಾಡೋಣ, ಪಟ್ಟಣದ ಬಸ್ ಸ್ಟಾಂಡ್ ನಲ್ಲಿ ಸ್ವಚ್ಛತೆ ಇಲ್ಲ. ಈ ಬಗ್ಗೆ ಪತ್ರಿಕೆಗಳಲ್ಲಿ ಬಂದರೂಸ್ವಚ್ಛತೆ ಮರೀಚಿಕೆಯಾಗಿದೆ, ದಿನನಿತ್ಯ ಸ್ವಚ್ಛತೆ ಕಾಯ್ದುಕೊಳ್ಳಿ, ಸಾರಿಗೆ ಸಿಬ್ಬಂದಿ ಕೊರತೆ ಇದ್ದರೆ ಸಚಿವರು ಜತೆಗೆ ಮಾತನಾಡಿ ಬಗೆಹರಿಸಲಾಗುವುದು, ಸಾರಿಗೆ ಸಿಬ್ಬಂದಿಗಳು ಪ್ರಯಾಣಿಕರು ಜೊತೆಗೆ ಸೌಜನ್ಯದಿಂದ ವರ್ತಿಸಬೇಕು, ಗ್ರಾಮೀಣ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ವೇಳೆಗೆ ಸರಿಯಾಗಿ ಬರುವಂತೆ ಬಸ್ ವ್ಯವಸ್ಥೆ ಮಾಡಿ ಎಂದು ಸಾರಿಗೆ ಅಧಿಕಾರಿಗಳಿಗೆ ಹೇಳಿದರು.

ಯುವ ನಿಧಿ ಯೋಜನೆ ಬಗ್ಗೆ ಪದವೀಧರರಿಗೆ ಸರಿಯಾಗಿ ಮಾಹಿತಿ ಕೊಡಿ, ಅಧಿಕಾರಿಗಳು ಸರ್ಕಾರಕ್ಕೆ ಕೆಟ್ಟು ಹೆಸರು ತರುವ ಕೆಲಸ ಮಾಡಬೇಡಿ. ಯಾವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಲ್ಲವೋ ಅಂತಹ ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಸುಧಾರಣೆ ಆಗದೆ ಹೋದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೆ ವೇಳೆ ಗ್ಯಾರಂಟಿ ಸಮಿತಿ ಸದಸ್ಯ ಸಿದ್ದಲಿಂಗೇಶ ರಗಟಿ ಬಸ್‌ಗಳು ಸರಿಯಾಗಿ ರೂಟ್ ಪ್ರಕಾರ ಓಡಿಸಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ದೂರಿದರು.

ಈ ವೇಳೆ ತಹಸೀಲ್ದಾರ್ ವಾಸುದೇವ ವಿ ಸ್ವಾಮಿ ಪಂಚ ಗ್ಯಾರಂಟಿ ಯೋಜನೆಗಳನ್ನು ಪೂರ್ಣಪ್ರಮಾಣದಲ್ಲಿ ಜನರಿಗೆ ಮುಟ್ಟಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಹೇಳಿದರು.ಸದಸ್ಯೆ ಜಯಕ್ಕ ಕಳ್ಳಿ ಬಸ್ ನಲ್ಲಿ ವಿದ್ಯಾರ್ಥಿಗಳಿಗೆ ಹತ್ತಲಿಕ್ಕೆ ಆಗ್ತಾ ಇಲ್ಲ, ಮೊದಲು ಶಾಲಾ ಮಕ್ಕಳನ್ನು ಬಸಲ್ಲಿ ಹತ್ತಿಸಿ ನಂತರ ಪ್ರಯಾಣಿಕರು ಹತ್ತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸದಸ್ಯ ಕಾರ್ತಿಕ ದೊಡ್ಡಮನಿ ಯುವ ನಿಧಿ ಯೋಜನೆ ಬಗ್ಗೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಲಕ ತಿಳಿಸಿರಿ ಎಂದು ಸಲಹೆ ನೀಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿದರು. ಹೆಸ್ಕಾಂ, ಸಾರಿಗೆ ಆಹಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಾಗೂ ಉದ್ಯೋಗ ವಿನಿಮಯ ಕೇಂದ್ರ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ರಮಜಾನ ಸಾಬ್ ನದಾಫ, ಎಂ.ಎಸ್. ಪ್ರಭಯ್ಯನಮಠ, ನೂರಅಹ್ಮದ ರಿತ್ತಿ, ಕಲ್ಲಪ್ಪ ಗಂಗಣ್ಣವರ, ರಾಜು ಕೇರೆಕೊಪ್ಪದ, ರಮೇಶ ಬಾರಕೇರ, ಶಶಿಕಲಾ ಬಡಿಗೇರ, ಹಸನ್ ಜಂಗ್ಲಿ ಇದ್ದರು.