ಸಾರಾಂಶ
ಕರ್ನಾಟಕ ಸಂಭ್ರಮ- ೫೦ರ ಅಂಗವಾಗಿ ಚಿಗುರು ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮ.
ಸಂಡೂರು: ಶೈಕ್ಷಣಿಕ ಹಾಗೂ ಕ್ರೀಡೆಯ ಜತೆಗೆ ಮಕ್ಕಳಿಗೆ ನಮ್ಮ ಕಲೆ, ಸಂಸ್ಕೃತಿ ಸಾಹಿತ್ಯವನ್ನು ಪರಿಚಯಿಸಬೇಕು. ಅವರಲ್ಲಿ ಅಡಗಿರುವ ಕಲಾ ಪ್ರತಿಭೆಯನ್ನು ಬೆಳಕಿಗೆ ತರಲು ಶಿಕ್ಷಕರು ಹಾಗೂ ಪಾಲಕರು ಶ್ರಮಿಸಬೇಕು ಎಂದು ಸಂಡೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಗದೀಶ್ ಬಸಾಪುರ ಅಭಿಪ್ರಾಯಪಟ್ಟರು.
ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಡಾ. ಎಂ.ವೈ. ಘೋರ್ಪಡೆ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಳ್ಳಾರಿ ವತಿಯಿಂದ ಕರ್ನಾಟಕ ಸಂಭ್ರಮ- ೫೦ರ ಅಂಗವಾಗಿ ಚಿಗುರು ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಚಿಕೇತ್ ಭಟ್ ಜೋಷಿ ಅವರಿಂದ ವಾಯಲಿನ್ ವಾದನ, ದೋಣಿಮಲೈನ ಸಿಂಚನಾ ಅವರಿಂದ ಸುಗಮ ಸಂಗೀತ, ಬಳ್ಳಾರಿಯ ನಿಧಿ ಆರ್ಟ್ಸ್ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ದೋಣಿಮಲೈನ ಎಸ್. ಕೀರ್ತನಾ ಅವರಿಂದ ಜಾನಪದ ಗೀತೆಗಳು, ಸಿರಿವಾರದ ಮಲ್ಲಿಕಾರ್ಜುನ ಅವರಿಂದ ಬಾಲಕೃಷ್ಣ ಬಯಲಾಟ ಏಕಪಾತ್ರಾಭಿನಯ, ಇಬ್ರಾಹಿಂಪುರದ ಎಚ್. ರಾಹುಲ್ ಮತ್ತು ಸಂಗಡಿಗರಿಂದ ಗೌರಮ ಬುದ್ಧ ನಾಟಕವನ್ನು ಪ್ರದರ್ಶಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕ ಕೆ. ಕೊಟ್ರಪ್ಪ, ವಾಯಲಿನ್ ಕಲಾವಿದರಾದ ಮೋಹನ್ ಕಲಬುರ್ಗಿ, ಬಯಲಾಟ ಕಲಾವಿದರಾದ ಮೌನೇಶ್ ಆಚಾರ್, ಚಿತ್ರ ಕಲಾವಿದರಾದ ಮಂಜುನಾಥ ಗೋವಿಂದವಾಡ ಭಾಗವಹಿಸಿದ್ದರು. ಎಚ್. ಕುಮಾರಸ್ವಾಮಿ ಕಾರ್ಯಕ್ರಮವನ್ನು ನಿರ್ವಹಿಸಿದರು.