ಸಾರಾಂಶ
ನರೇಗಲ್ಲ: ಭಾರತ ಜಗತ್ತಿಗೇ ಮಾರ್ಗದರ್ಶನ ಮಾಡಬಹುದಾದ ಶಕ್ತಿ ಹೊಂದಿದೆ. ಇಲ್ಲಿನ ಸಂಸ್ಕೃತಿ ಸಂಸ್ಕಾರ ವಿದೇಶಿಗರೂ ಸಹ ಗೌರವಿಸುತ್ತಾರೆ. ಡಾ. ಅಂಬೇಡ್ಕರ್ ಎಂದಿಗೂ ತಲೆ ಎತ್ತಿ ನಿಲ್ಲುವಂತಹ ಸಂವಿಧಾನ ನಮಗೆ ರಚಿಸಿಕೊಟ್ಟಿದ್ದಾರೆ. ಇದರಲ್ಲಿ ಹಕ್ಕು, ಕರ್ತವ್ಯಗಳೂ ಇವೆ. ನಮ್ಮ ಹಕ್ಕುಗಳಿಗಾಗಿ ಬಡಿದಾಡುವ ನಾವು, ಕರ್ತವ್ಯ ಮರೆಯುತ್ತಿದ್ದೇವೆ. ನಮ್ಮಲ್ಲಿ ದೇಶಭಕ್ತಿ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರು ದೇಶಭಕ್ತಿ ಬೆಳೆಸಿಕೊಳ್ಳಬೇಕೆಂದು ಸಂಸ್ಥೆಯ ಅಧ್ಯಕ್ಷ ಮುಪ್ಪಿನ ಬಸವಲಿಂಗ ಶ್ರೀ ಹೇಳಿದರು.
ಸ್ಥಳೀಯ ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಅಂಗ ಸಂಸ್ಥೆಗಳಿಂದ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ನಡೆದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಗತ್ತಿನಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿದ್ದು, ಆರ್ಥಿಕ, ಸಾಮಾಜಿಕ, ಸಾರ್ವಜನಿಕ ರಂಗಗಳಲ್ಲಿ ತನ್ನ ಛಾಪ ಮೂಡಿಸುತ್ತಿದೆ. ಈಗ ಭಾರತವು ಜಗತ್ತಿಗೆ ವಿಶ್ವನಾಯಕನಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿರುವುದರಿಂದ ಜಗತ್ತೇ ಭಾರತದೆಡೆಗೆ ಅಚ್ಚರಿಯಿಂದ ನೋಡುತ್ತಿದೆ ಎಂದರು.
ಈ ವೇಳೇ ಶಾಲಾ ವಿದ್ಯಾರ್ಥಿಗಳು ಭಾರತಾಂಬೆ,ಒನಕೆ ಓಬವ್ವ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಸ್ವಾಮಿ ವಿವೇಕಾನಂದ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ,ಸಾವಿತ್ರಿಬಾಯಿ ಫುಲೆ,ಅಂದಾನಪ್ಪ ದೊಡ್ಡಮೇಟಿ ಮತ್ತು ಬೆಳವಡಿ ಮಲ್ಲಮ್ಮನವರ ರೂಪಗಳಲ್ಲಿ ಕಾಣಿಸಿಕೊಂಡು ರಾಷ್ಟ್ರ ಪ್ರೇಮ ಮೆರೆದರು.ಟಿ.ಎಸ್. ರಾಜೂರ, ಆರ್.ಬಿ. ಪಾಟೀಲ ಮುಂತಾದವರು ಮಾತನಾಡಿದರು. ಕಿವುಡ ಮತ್ತು ಮೂಕ ಮಕ್ಕಳಿಂದ ಅದ್ಭುತ ಪ್ರದರ್ಶನ ಕಂಡಿದ್ದ ಕಡ್ಲಿಮಟ್ಟಿ ಕಾಶಿಬಾಯಿ ನಾಟಕಕ್ಕೆ ಶ್ರೀಗಳು ಅಭಿನಂದನೆ ಸಲ್ಲಿಸಿದರು.
ಈ ವೇಳೆ ಸಾಧಕರನ್ನು ಸನ್ಮಾನಿಸಲಾಯಿತು.ಆಡಳಿತ ಮಂಡಳಿ ಮುಖ್ಯಸ್ಥ ಬಸವರಾಜ ವೀರಾಪೂರ, ಸೋಮಣ್ಣ ಹರ್ಲಾಪೂರ, ರವೀಂದ್ರನಾಥ ದೊಡ್ಡಮೇಟಿ, ವೀರಣ್ಣ ಹಳ್ಳಿ, ಶರಣಪ್ಪ ರೇವಡಿ ಸೇರಿದಂತೆ ಇತರರು ಇದ್ದರು.