ನೆಲ, ಜಲ, ಕೃಷಿಯ ಕುರಿತು ಜನ ಜಾಗೃತರಾಗಲಿ: ಡಾ. ರಾಜೇಂದ್ರ

| Published : May 28 2024, 01:13 AM IST

ನೆಲ, ಜಲ, ಕೃಷಿಯ ಕುರಿತು ಜನ ಜಾಗೃತರಾಗಲಿ: ಡಾ. ರಾಜೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳಿಗೆ ಈಗಿನಿಂದಲೇ ಕೆರೆ, ಹೊಂಡ, ನದಿ, ಮುಂತಾದ ಜಲಮೂಲಗಳ ರಕ್ಷಣೆ ಹಾಗೂ ಅವುಗಳು ಮಲೀನವಾಗದಂತೆ ನೋಡಿಕೊಳ್ಳುವ ಬಗ್ಗೆ ತಿಳಿಸಬೇಕು. ಇದರ ಅಗತ್ಯತೆ ಕುರಿತು ತಿಳಿವಳಿಕೆ ನೀಡಬೇಕು.

ಮುಂಡಗೋಡ: ಸಾವಿರಾರು ಕೋಟಿ ತೆರಿಗೆ ಹಣವನ್ನು ನೀರಾವರಿ ಕ್ಷೇತ್ರಕ್ಕೆ ವಿನಿಯೋಗ ಮಾಡಲಾಗುತ್ತಿದ್ದರೂ ಕೃಷಿ ಕ್ಷೇತ್ರದಲ್ಲಿ ರೈತ ಕಷ್ಟ ಎದುರಿಸುವುದು ತಪ್ಪಿಲ್ಲ. ನೆಲ, ಜಲ, ಕೃಷಿಯ ಕುರಿತು ಜಾಗೃತರಾಗಬೇಕಿದೆ ಎಂದು ಧಾರವಾಡದ ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ. ರಾಜೇಂದ್ರ ಪೊದ್ದಾರ್ ಹೇಳಿದರು

ಪಟ್ಟಣದ ಲೊಯೋಲಾ ವಿಕಾಸ ಕೇಂದ್ರ ಸಭಾಂಗಣದಲ್ಲಿ ಮನುವಿಕಾಸ ಸಂಸ್ಥೆ ಹಾಗೂ ಎಚ್‌ಡಿಬಿ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕೆರೆ ಸಮಾವೇಶದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ. ಆದರೆ ಮಳೆಯ ಪ್ರಮಾಣ ಕಡಿಮೆಯಾಗಿಲ್ಲ ಬದಲಾಗಿ ವಿಧಾನ ಬದಲಾಗಿದ್ದರಿಂದ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ಮಕ್ಕಳಿಗೆ ಈಗಿನಿಂದಲೇ ಕೆರೆ, ಹೊಂಡ, ನದಿ, ಮುಂತಾದ ಜಲಮೂಲಗಳ ರಕ್ಷಣೆ ಹಾಗೂ ಅವುಗಳು ಮಲೀನವಾಗದಂತೆ ನೋಡಿಕೊಳ್ಳುವ ಬಗ್ಗೆ ತಿಳಿಸಬೇಕು. ಇದರ ಅಗತ್ಯತೆ ಕುರಿತು ತಿಳಿವಳಿಕೆ ನೀಡಬೇಕು ಎಂದರು.

ನೆಲ, ಜಲ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆ, ಗುರುತರ ಜವಾಬ್ದಾರಿಯಾಗಿದೆ. ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಜಲ ಸಮಸ್ಯೆ ಎದುರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ನೀರನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ವಿನಾಕಾರಣ ನೀರನ್ನು ಬಳಸುವುದು ಬಿಡಬೇಕು ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ್ ಉದ್ಘಾಟಿಸಿ ಮಾತನಾಡಿ, ತಾವು ಶಾಸಕರಿದ್ದಾಗ ತಮ್ಮ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಅನುದಾನ ತಂದು ೮- ೧೦ ಕೆರೆ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಮನುವಿಕಾಸ ಸಂಸ್ಥೆಯ ಅನುಷ್ಠಾನ ರೀತಿಯಲ್ಲಿ ಕೆರೆ ಅಭಿವೃದ್ಧಿ ಮಾಡಲು ಸರ್ಕಾರದಿಂದ ಸಾಧ್ಯವಾಗಲಿಲ್ಲ. ಸಂಸ್ಥೆಯು ಕೆರೆ ಕೆಲಸ ಮಾಡಲು ಬಂದಾಗ ರೈತರೆಲ್ಲರೂ ಸಹಕಾರ ನೀಡಬೇಕು. ಸಂಸ್ಥೆಯ ನಿಸ್ವಾರ್ಥ ಸೇವೆಯ ಕಾರ್ಯ ಶ್ಲಾಘನೀಯ ಎಂದರು.ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ್ ಮಾತನಾಡಿ, ಸರ್ಕಾರ ಅನುಷ್ಠಾನ ಮಾಡದ ಕೆಲಸವನ್ನು ಮನುವಿಕಾಸ ಸಂಸ್ಥೆ ಮಾಡುತ್ತಿದೆ ಎಂದರು. ಸಾಗರ ತಾಲೂಕಿನ ರೈತ ಮುಖಂಡರಾದ ದಿನೇಶ ಶಿರವಾಳ ಮಾತನಾಡಿ, ಕೆರೆಗಳ ಮೂಲ ಸ್ವರೂಪವನ್ನೆ ಬದಲಿಸಿ ಮಲೀನ ಮಾಡುತ್ತಿರುವುದು ಜನರೇ ಆಗಿದ್ದಾರೆ. ನಾವೆಲ್ಲರೂ ಕೆರೆಗಳನ್ನು ಜೋಪಾನ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಿದೆ. ಮನುವಿಕಾಸ ಸಂಸ್ಥೆಯು ಜೀವ ಜಲಚರಗಳಿಗೆ ಒಳಿತಾಗುವ ಕಾರ್ಯವನ್ನು ಮಾಡುತ್ತಿದೆ. ರಾಜ್ಯದ ಎಲ್ಲ ತಾಲೂಕಿಗೂ ನಿಮ್ಮ ಸೇವೆ ಲಭ್ಯವಾಗಲಿ ಎಂದರುಸಂಸ್ಥೆಯ ನಿರ್ದೇಶಕ ಗಣಪತಿ ಭಟ್ಟ ಪ್ರಾಸ್ತಾವಿಕ ಮಾತನಾಡಿ, ಸ್ವತಂತ್ರವಾಗಿ ಬದುಕಬಲ್ಲ ವ್ಯಕ್ತಿ ರೈತ. ಉತ್ತರ ಕನ್ನಡ, ಧಾರವಾಡ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮನುವಿಕಾಸ ಸಂಸ್ಥೆಯು ೨೮೦ ಕೆರೆಗಳನ್ನು ಹೂಳೆತ್ತಿ ಪುನರುಜ್ಜೀವನಗೊಳಿಸಿದೆ. ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕಿನಲ್ಲಿ ೩೬೦೦ಕ್ಕೂ ಹೆಚ್ಚು ಕೃಷಿ ಹೊಂಡವನ್ನು ರೈತರ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿದೆ. ಕೆರೆಗೆ ನೀರು ತುಂಬಿಸಲು ಸಾವಿರಾರು ಕೋಟಿ ರೂಪಾಯಿಯನ್ನು ಸರ್ಕಾರ ವ್ಯಯಿಸುತ್ತದೆ. ಆದರೆ, ಕೆರೆಗೆ ಸಮರ್ಪಕ ರೀತಿಯಲ್ಲಿ ನೀರು ಸಂಗ್ರಹ ಮಾಡಲು ಹೂಳೆತ್ತುವ ಕೆಲಸವನ್ನು ಮಾಡುತ್ತಿಲ್ಲ ಎಂದು ವಿಷಾದಿಸಿದರು

ವಾಲ್ಮಿ ಸಂಸ್ಥೆಯ ಅಧಿಕಾರಿ ಸುರೇಶ ಕುಲಕರ್ಣಿ, ಪ್ರಗತಿಪರ ರೈತರಾದ ನಾಗರಾಜ ಬೆಣ್ಣಿ, ಜಿಲ್ಲಾ ರೈತ ಪ್ರಶಸ್ತಿ ವಿಜೇತ ಪ್ರಗತಿ ಪರ ರೈತ ಬಸವರಾಜ ನಡುವಿನಮನಿ, ತಾಲೂಕು ರೈತ ಸಂಘದ ಅಧ್ಯಕ್ಷ ಪಿರಜ್ಜಾ ಸಾಗರ, ಸಮಾಜ ಸೇವಕ ಜ್ಞಾನೇಶ್ವರ ಗುಡಿಹಾಳ ಹಾಗೂ ರೈತ ಮುಖಂಡರಾದ ಪರಶುರಾಮ ಪೂಜಾರ, ಬಸವರಾಜ ಕರ್ಲಟ್ಟಿ, ಕಲ್ಲಪ್ಪ ಹುಲ್ಲಂಬಿ ಹಾಗೂ ಮುಂಡಗೋಡ, ಕಲಘಟಗಿ ಹಾಗೂ ಶಿಗ್ಗಾಂವಿ ತಾಲೂಕಿನ ರೈತರು ಸೇರಿದಂತೆ ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.