ಜನರಿಗೆ ಧಾರ್ಮಿಕ ಮನೋಭಾವ ಮೂಡಲಿ

| Published : Jan 30 2025, 12:31 AM IST

ಸಾರಾಂಶ

ನೀವೆಲ್ಲ ಭಕ್ತಿ ಮಾರ್ಗದಲ್ಲಿ ಹೋಗಲು ಬಸವಣ್ಣಜ್ಜನವರು ಬಹಳ ಶ್ರಮ ಪಡುತ್ತಿದ್ದಾರೆ. ಈ ಭಾಗದ ಜನರಿಗೆ ಧಾರ್ಮಿಕ ಮನೋಭಾವ ಮೂಡಲಿ, ಹೀಗೆ ವೈಭವದ ಕಾರ್ಯಕ್ರಮ ನಡೆಯಲಿ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದ್ದಾರೆ.

ಕುಂದಗೋಳ:

ಬಸವಣ್ಣನವರು ಹೇಳಿದಂತೆ ಭಕ್ತಿಯಲ್ಲಿ ಸಂತೋಷವಿದೆ. ಭಕ್ತಿಯೇ ನಿಜವಾದ ಸಂಪತ್ತು ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ನಡೆಯುತ್ತಿರುವ ಲಿಂ. ಬಸವಣ್ಣಜ್ಜನವರ ಪುಣ್ಯ ಸ್ಮರಣೋತ್ಸವ ಹಾಗೂ ಕಲ್ಯಾಣಪುರ ವೈಭವ ಕಾರ್ಯಕ್ರಮದ 5 ದಿನದ ಅಂಗವಾಗಿ ಭಕ್ತ ಸೇವಾ ಸಿರಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನೀವೆಲ್ಲ ಭಕ್ತಿ ಮಾರ್ಗದಲ್ಲಿ ಹೋಗಲು ಬಸವಣ್ಣಜ್ಜನವರು ಬಹಳ ಶ್ರಮ ಪಡುತ್ತಿದ್ದಾರೆ. ಈ ಭಾಗದ ಜನರಿಗೆ ಧಾರ್ಮಿಕ ಮನೋಭಾವ ಮೂಡಲಿ, ಹೀಗೆ ವೈಭವದ ಕಾರ್ಯಕ್ರಮ ನಡೆಯಲಿ ಎಂದರು.

ದುಮ್ಮವಾಡದ ಸರ್ಪಭೂಷಣ ದೇವರು ಮಾತನಾಡಿ, ಲಿಂ. ಬಸವಣ್ಣಜ್ಜನವರು ಸಹ ದಾಸೋಹ ಮಾಡುತ್ತಿದ್ದರು. ಹಸಿದು ಬಂದವರಿಗೆ ಅನ್ನ ಬಡಿಸುತ್ತಿದ್ದರು. ನನ್ನ ಮಠ ಚಿನ್ನದ ಮಠ, ಬಂಗಾರದ ಮಠ ಆಗುವುದು ಬೇಡ. ಹಸಿದವರಿಗೆ ಅನ್ನ ಹಾಕುವ ಮಠವಾಗಬೇಕೆಂಬುದು ಅವರ ಆಶಯವಾಗಿತ್ತು. ಅದರಂತೆ ಮಠವು ಇಂದು ಅಷ್ಟೊಂದು ಪ್ರಸಿದ್ಧಿಯಾಗಿದೆ ಎಂದು ಹೇಳಿದರು.

ಶ್ರೀಕೃಷ್ಣ ಹೇಳಿದಂತೆ ದೇಹ ಮಣ್ಣು ಪಾಲು, ವಸ್ತ್ರಗಳೆಲ್ಲ ಅಗಸನ ಪಾಲು, ಹೂತಿಟ್ಟ ಧನವೆಲ್ಲ ಧರಣಿಪಾಲು, ಸ್ವತ್ತುಗಳೆಲ್ಲ ಸತ್ತವರ ಮುಂದಿನ ಪಾಲು, ಮಗನಿಗೆ ಇಡುವ ಪಿಂಡ ಕಾಗೇ ಪಾಲು, ಅರಿಯದ ಈ ಜೀವ ಯಮನ ಪಾಲು, ಅದಕ್ಕೆ ನಿನ್ನ ಪಾಲು ಯಾವುದಾದರೂ ಇದ್ದರೆ ದಾನ ಮಾಡುವುದರಿಂದ ಎಲ್ಲವು ಒಳ್ಳೆಯದಾಗುತ್ತದೆ ಎಂದರು.

ಈ ವೇಳೆ ಗುಡಗೇರಿ ಪಿಎಸ್‌ಐ ನವೀನ ಜಕ್ಕಲಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿ ಭಕ್ತ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯರೇಬೂದಿಹಾಳ ಗ್ರಾಮದ ಸೇವಾ ಸಮಿತಿ ಹಾಗೂ ಗ್ರಾಮಸ್ಥರಿಂದ ದಾಸೋಹ ನಡೆಯಿತು.

ಈ ವೇಳೆ ಚನ್ನವೀರ ಸ್ವಾಮೀಜಿ, ಶಿವಾನಂದ ಮಠದ ಶಿವಾನಂದ ಸ್ವಾಮೀಜಿ, ಮಹಾಂತ ದೇವರು, ನಿಡಶೋಶಿಯ ಕರಿಬಸವ ಸ್ವಾಮೀಜಿ, ಸಿದ್ದರಾಮ ದೇವರು, ಕಲಬುರ್ಗಿ ನಿರಪಾದಿ ದೇವರ, ಶಶಿಕುಮಾರ ದೇವರು, ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ, ಕಾಂಗ್ರೆಸ್ ಮುಖಂಡರಾದ ಗೌಡಪ್ಪಗೌಡ ಪಾಟೀಲ, ಎ.ಬಿ. ಉಪ್ಪಿನ, ಗೌತಮ ಬಾಪನಾ ಇದ್ದರು.