ಸಾರಾಂಶ
ಎಂ.ಪ್ರಹ್ಲಾದ್
(ಶಬರಿ ವೇದಿಕೆ ಆನೆಗೊಂದಿ)ಕನ್ನಡಪ್ರಭ ವಾರ್ತೆ ಕನಕಗಿರಿ
ಆನೆಗೊಂದಿಯ ಕಲೆ, ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರಕ್ಕೆ ಇರುವ ಶ್ರೀಮಂತಿಕೆ ಕಾವ್ಯಕ್ಕೂ ಸಿಕ್ಕಾಗ ಮಾತ್ರ ಈ ನಾಡು ಸಮೃದ್ಧವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶರಣೇಗೌಡ ಪಾಟೀಲ ಹೇಳಿದರು.2024ರ ಆನೆಗೊಂದಿ ಉತ್ಸವ ಅಂಗವಾಗಿ ಆನೆಗೊಂದಿಯ ಗಗನ್ ಮಹಲ್ ಬಳಿಯ ಶಬರಿ ವೇದಿಕೆಯಲ್ಲಿ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಎಲ್ಲರೂ ಕವಿಗಳಾಗಲೂ ಅಸಾಧ್ಯ. ಕಾವ್ಯದ ಬಗ್ಗೆ ನಿರಂತರ ಅಧ್ಯಯನ, ಜ್ಞಾನ ಸಂಪಾದಿಸುವವನು ಮಾತ್ರ ಕವಿಯಾಗುತ್ತಾನೆ. ಕಾವ್ಯ ರಚನೆ ಸುಮ್ಮನೆ ಬರುವುದಿಲ್ಲ. ಭಯಗ್ರಸ್ಥನಾಗಿಯೂ ಅಥವಾ ಜಾತಿಯ ಮೇಲಿನ ಅಭಿಮಾನ ಇರುವವರು ಕವಿಗಳಾಗಬಾರದು. ಕವಿಯಾದವ ನಿರ್ಭಿತಿಯಿಂದ ಇದ್ದುಕೊಂಡು ಸಾಮಾಜಿಕ ಪರಿವರ್ತನೆ ಹಾಗೂ ಸರ್ಕಾರದ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುವ ಕೆಲಸ ಕವಿತೆ ಬರೆಯುವ ಮೂಲಕ ಆದಾಗ ಮಾತ್ರ ಕವಿ ಮತ್ತು ಕಾವ್ಯಕ್ಕೆ ಒಂದು ಬೆಲೆ ಸಿಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರು ಮಾತನಾಡಿ, ಕಾವ್ಯದಲ್ಲಿ ಶಬ್ದಗಳ, ಭಾವನೆಗಳ ಮೆರವಣಿಗೆಯಾಗಬೇಕು. ಕವಿಗಳು ಅಧ್ಯಯನಶೀಲರಾಗಿ ಕವಿತೆ ಬರೆದರೆ ಅದಕ್ಕೆ ಬಹುದೊಡ್ಡ ರೂಪ ಸಿಗುತ್ತದೆ. ಕಾವ್ಯ ಭಾವನೆಗಳನ್ನು ಅರಳಿಸಬೇಕೆ ಹೊರತು ಕೆರಳಿಸುವಂತಿರಬಾರದು. ಕವಿತೆಗಳು ಮನಸ್ಸು ಮುಟ್ಟುವಂತಿದ್ದರೆ ಕಾವ್ಯಲೋಕ ಮೊಗೆದಷ್ಟು ಎತ್ತರಕ್ಕೆ ಬೆಳೆಯಲಿದೆ. ಆನೆಗೊಂದಿ ಉತ್ಸವದ ಕವಿಗೋಷ್ಠಿಯಲ್ಲಿ ಬೆರಳಣಿಕೆ ಕವಿಗಳು ಮಾತ್ರ ಅತ್ಯುತ್ತಮ ಕಾವ್ಯ ರಚಿಸಿದ್ದು, ಒಟ್ಟು 83 ಕವಿಗಳು ತಮ್ಮ ಕವಿತೆಗಳನ್ನು ವಾಚಿಸಿದರು ಎಂದು ತಿಳಿಸಿದರು.ಯುವ ಸಾಹಿತಿ ಜಾಜಿ ದೇವೇಂದ್ರಪ್ಪ ಆಶಯ ನುಡಿಗಳನ್ನಾಡಿ, ಸಾಮಾಜಿಕ ಜಾಲತಾಣಗಳಿಂದ ಕಾವ್ಯಲೋಕ ಹದಗೆಟ್ಟು ಹೋಗಿದೆ. ಆನೆಗೊಂದಿಯಂತಹ ಸಾಂಸ್ಕೃತಿಕ ವೈಭವದ ನಾಡಲ್ಲಿ ಕಾವ್ಯ ರಚನೆಗೇನೂ ಕೊರತೆಯಿಲ್ಲ. ಈ ಭಾಗದ ಕವಿಗಳ ಬರಹಗಳು ನಿರಂತರ ಜ್ಯೋತಿಯಂತೆ ಬೆಳಗುತ್ತಿವೆ. ಮೊಗದಷ್ಟು ಕಾವ್ಯಕ್ಕೆ ರೂಪಕೊಟ್ಟು ಹೊಸ ಜಗತ್ತು ಕಟ್ಟುವಂತಾಗಬೇಕು. ಅಭಿವ್ಯಕ್ತಿ ಹಾಗೂ ಸೃಜನಶೀಲತೆ ಕವಿತೆಯಲ್ಲಿದ್ದಾಗ ಸಮಾಜ ಅಷ್ಟೇ ಅಲ್ಲ, ನಾಡು ಕಟ್ಟುವ ಶಕ್ತಿ ಅದಕ್ಕಿರುತ್ತದೆ. ಕವಿಗಳು ನಿರಾಂತಕದಿಂದ ಕವಿತೆ ರಚಿಸುವಂತೆ ಸಲಹೆ ನೀಡಿದರು.
ಶಾಲಾ ಮಕ್ಕಳಿಂದ ಕವಿತೆ ವಾಚನ:ಕಾರಟಗಿ ತಾಲೂಕಿನ ಸಿದ್ದಾಪುರ, ಶ್ರೀರಾಮನಗರದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮಕ್ಕಳು ತಾವು ರಚಿಸಿದ ಕವಿತೆ ವಾಚಿಸಿದರು. ಕನ್ನಡ ಅಭಿಮಾನ, ಆನೆಗೊಂದಿ ಉತ್ಸವ, ಶಾಲಾ ವಿದ್ಯಾರ್ಥಿಗಳ ಬಾಲ್ಯಾವಸ್ಥೆ ಕುರಿತಂತೆ ಕವಿತೆಗಳು ಮಕ್ಕಳಿಂದ ವಾಚನಗೊಂಡವು. ನೆರದಿದ್ದ ಸಾಹಿತ್ಯಾಸಕ್ತರು ತಮ್ಮ ಕರತಾಡನದ ಮೂಲಕ ಪ್ರೋತ್ಸಾಹಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀನಿವಾಸ ಅಂಗಡಿ, ಮೆಹಬೂಬುಹುಸೇನ್ ಬೇಲ್ದಾರ್, ಸಾಹಿತಿಗಳಾದ ರವೀಂದ್ರಸಾ ಬಾಕಳೆ, ಲಿಂಗಣ್ಣ ಜಂಗಮರಹಳ್ಳಿ, ಹನುಮೇಶ ಗುಮಗೇರಿ, ರಾಘವೇಂದ್ರ ದಂಡಿನ್, ಡಾ. ಪಾರ್ವತಿ, ಶರಣಪ್ಪ ಮಹಿಪತಿ, ಪಂಪಣ್ಣ ಬನ್ನಿಮರದ ಸೇರಿದಂತೆ ಸಾಹಿತ್ಯಾಸಕ್ತರು ಇದ್ದರು.