ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದಸರಾ ಕಾವ್ಯ ಸಂಭ್ರಮ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮಹಿಳೆಯರಿಗೆ ಗೌರವ ದೊರೆಯುವಂತೆ ಮಹಿಳೆಯಿಂದ ಉದ್ಘಾಟನೆ ಮಾಡುವ ಅವಕಾಶ ನೀಡಿದ್ದು ದಸರಾ ಹಬ್ಬಕ್ಕೆ ಶೋಭೆ ತಂದಿದೆ. ಕಾವ್ಯ ಸಮಾಜದ ಬದಲಾವಣೆಗೆ ಬೆಳಕು ಬೀರುವಂತಾಗಲಿ ಎಂದು ದಾವಣಗೆರೆಯ ಕವಯಿತ್ರಿ ವೀಣಾ ಕೃಷ್ಣಮೂರ್ತಿ ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಿವಮೊಗ್ಗ ಶಾಖಾ ಮಠದ ಸಹಯೋಗದಲ್ಲಿ ಶರಾವತಿ ನಗರದ ಶ್ರೀ ಕಾಳಿಕಾಂಬ ದೇವಾಲಯ ಆವರಣದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಕವಿಗೋಷ್ಠಿ ಆಶಯ ಮಾತನಾಡಿ, ವರ್ತಮಾನದ ತಲ್ಲಣಗಳಿಗೆ ಕವಿಗಳು ಸ್ಪಂದಿಸಿ ಕವನ ಬರೆಯುವಂತೆ ಮನವಿ ಮಾಡಲಾಗಿತ್ತು. ನಾಡಿನಾದ್ಯಂತ ಸುಮಾರು ಅರವತ್ತು ಕವಿಗಳು ಸ್ಪಂದಿಸಿ ಕವನ ಬರೆದು ಕಳುಹಿಸಿದ್ದರು. ಅವುಗಳಲ್ಲಿ ಆಯ್ದ ಮೂವತ್ತೊಂದು ಕವಿಗಳು ಈ ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ ಎಂದು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಗಣೇಶ್‌ಮೂರ್ತಿ ನಾಗರಕೊಡಿಗೆ ಅವರು ಒಂದು ಕಾರ್ಯಕ್ರಮ ರೂಪಿಸಲು ಹಣಬೇಕು, ವ್ಯವಸ್ಥೆ ಮಾಡಬೇಕು, ಕೇಳುಗರು ಬೇಕು ಇವೆಲ್ಲವನ್ನೂ ಹೊಂದಿಸಿ ಕಾರ್ಯಕ್ರಮ ನಡೆಸುವ ಡಿ.ಮಂಜುನಾಥ ಮತ್ತು ತಂಡಕ್ಕೆ ಎಲ್ಲರೂ ಆರ್ಥಿಕ ಬಲ ತರಬೇಕುಎಂದು ಹೇಳಿ ತಾವು ತಂದಿದ್ದ ಹತ್ತು ಸಾವಿರ ರು. ಚೆಕ್ ಹಸ್ತಾಂತರ ಮಾಡಿದರು.
ಕವಿಗಳಿಗೆ ತಾವು ಬರೆದ ಕವನ ಶ್ರೇಷ್ಠವೇ ಆಗಿರುತ್ತದೆ. ಬರೆದ ಖುಷಿಯಲ್ಲಿ ಪ್ರಾಸಕ್ಕೆ ಜೋತು ಬೀದ್ದು ಉದ್ದಮಾಡಿ ಕೇಳುಗರು ಗ್ರಹಿಸದಂತೆ ಮಾಡಬಾರದು. ಒಂದು ಕವಿತೆ ಎಲ್ಲರಿಗೂ ಹಿಡಿಸಬೇಕು ಎನ್ನುವುದು ಕಷ್ಟ. ಕೇಳುಗ, ಓದುಗನಿಗೆ ಕವಿತೆಗಳು ಕಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಶ್ರೀ ಸಾಯಿನಾಥ ಸ್ವಾಮೀಜಿ ವೀಣಾ ಕೃಷ್ಣಮೂರ್ತಿ, ಗಣೇಶ್ ಮೂರ್ತಿ ನಾಗರಕೊಡಿಗೆ, ಕೆ.ಎಸ್.ಶಶಿಕಲಾ ಅವರನ್ನು ಸನ್ಮಾನಿಸಿದರು.
ಜನಪದ ಗೀತೆಗಳ ಹಾಡಿನ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಗುಡ್ಡಪ್ಪ ಜೋಗಿ ಮತ್ತು ತಂಡ ಮೊದಲ ಬಹುಮಾನ, ಹರ್ಷವರ್ಧನ ಮತ್ತು ತಂಡ ಎರಡನೇ, ಕಸ್ತೂರಬಾ ಬಾಲಿಕಾ ಪ್ರೌಢಶಾಲಾ ತಂಡ ತೃತೀಯ ಬಹುಮಾನ ಪಡೆದರು.ಭಾರತಿ ರಾಮಕೃಷ್ಣ ಸ್ವಾಗತಿಸಿದರು. ಮಹಾದೇವಿ ನಿರೂಪಿಸಿದರು. ಕೆ.ಎಸ್. ಮಂಜಪ್ಪ ವಂದಿಸಿದರು. ಡಿ. ಗಣೇಶ್, ಭೈರಾಪುರ ಶಿವಪ್ಪಮೇಸ್ಟ್ರು, ಎಂ.ಎಂ.ಸ್ವಾಮಿ, ಸುಶೀಲಾ ಷಣ್ಮುಗಂ ವಿವಿದ ಕಾರ್ಯಗಳನ್ನು ನಿರ್ವಹಿಸಿದರು.