ಸಮಕಾಲೀನ ಸಮಸ್ಯೆಗಳಿಗೆ ಕವಿಗಳು ಧ್ವನಿಯಾಗಲಿ: ಸಾಹಿತಿ ಕಿಕ್ಕೇರಿ ಕೆ.ಜೆ.ನಾರಾಯಣ

| Published : Oct 30 2024, 12:33 AM IST

ಸಾರಾಂಶ

ಗ್ರಾಮ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಿ.ಕಿರಣ್ ಕುಮಾರ್ ಚಿಣ್ಣರನುಡಿ ಮಕ್ಕಳ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮಕಾಲೀನ ಸಮಸ್ಯೆ ಮತ್ತು ಕಣ್ಣೆದುರಿಗೆ ನಡೆಯುವ ಘಟನೆಗಳಿಗೆ ಕವಿಗಳು ಧ್ವನಿಯಾಗುವ ಮೂಲಕ ಸಮಾಜವನ್ನು ತಿದ್ದುವ ಕವಿತೆಗಳನ್ನು ರಚಿಸುವತ್ತ ಗಮನ ಹರಿಸಬೇಕು ಎಂದು ಸಾಹಿತಿ ಕಿಕ್ಕೇರಿ ಕೆ.ಜೆ.ನಾರಾಯಣ ಕರೆ ನೀಡಿದರು.

ಪಟ್ಟಣದ ಗ್ರಾಮಭಾರತಿ ವಿದ್ಯಾಸಂಸ್ಥೆ ಎಸ್.ಸಿ.ಚಿಕ್ಕಣ್ಣಗೌಡ ಸಭಾಂಗಣದಲ್ಲಿ ಅತ್ತಿಗುಪ್ಪೆ ಸಾಹಿತ್ಯ ಬಳಗದಿಂದ ದೀಪಾವಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಅಂತರ ಜಿಲ್ಲಾ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತೀಯ ಭಾಷೆಗಳಲ್ಲಿ ತನ್ನದೇ ಆದ ಸ್ಥಾನವನ್ನು ಕನ್ನಡ ಭಾಷೆ ಮತ್ತು ಸಾಹಿತ್ಯ ಹೊಂದಿದೆ. ಕನ್ನಡ ಸಾಹಿತ್ಯ ಪರಂಪರೆ ದೊಡ್ಡದಾಗಿದೆ. ಆದಿ ಕವಿ ಪಂಪನಿಂದ ಕುವೆಂಪುವರೆಗಿನ ಸಾಹಿತ್ಯ ಪ್ರಜ್ಞೆ ಬೇರೆ ಭಾಷೆಗಳಿಗಿಂತ ಕನ್ನಡದಲ್ಲಿ ಭಿನ್ನವಾಗಿ ಹರಿದುಬಂದಿದೆ ಎಂದರು.

ಕನ್ನಡದಲ್ಲಿ ಕವಿತೆ ಬರೆಯುವ ಕವಿಗಳು ಹಿರಿಯರ ಕೃತಿಗಳನ್ನು ಅಧ್ಯಯನ ಮಾಡಬೇಕು. ಕವಿತೆಗಳು ಭಾವನೆಗಳ ಪ್ರತಿಬಿಂಬವಾಗಿದ್ದು ಬರೆಯುವ ಕವಿತೆ ಸಮಾಜಕ್ಕೆ ಉತ್ತಮ ಸಂದೇಶ ಸಾರುವಂತಿರಬೇಕೇ ವಿನ: ಪ್ರಚೋದನೆ ಮಾಡಬಾರದು. ಸಾಮರಸ್ಯ ಸಂದೇಶ, ಸ್ವಾಸ್ಥ್ಯ ಸಮಾಜದ ಕನಸು ಕವಿತೆಗಳಲ್ಲಿ ಇರಬೇಕು ಎಂದು ಅಭಿಪ್ರಾಯಪಟ್ಟರು.

ಮಕ್ಕಳ ಸಾಹಿತಿ ಮಾರೇನಹಳ್ಳಿ ಲೋಕೇಶ್ ಬರೆದ ಪರಕಾಯ ಕವನ ಸಂಕಲನ ಬಿಡುಗಡೆ ಮಾಡಿದ ಸಾಹಿತಿ ಹುಣಸೂರಿನ ಹೊನ್ನೇನಹಳ್ಳಿ ಕುಮಾರ್ ಮಾತನಾಡಿ, ಲೊಕೇಶ್ ಅವರ ಪರಕಾಯ ಕವಿತೆಗಳಲ್ಲಿ ಕನ್ನಡದ ಹಿರಿಯ ಕವಿಗಳ ಸಾಹಿತ್ಯದ ಚಹರೆ ಇದೆ. ಕವಿತೆಗಳು ಸರಳ, ಸುಲಭ ಹಾಗೂ ರಾಗಬದ್ದವಾಗಿ ಹಾಡುವಂತಿವೆ. ಪ್ರಾಸಕ್ಕೆ ಒತ್ತು ನೀಡದೆ ಸಹಜವಾಗಿ ಕವಿತೆಗಳು ಕೃತಿಯಲ್ಲಿ ಹೊರಹೊಮ್ಮಿವೆ ಎಂದರು.

ಸಮಾರಂಭವನ್ನು ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್ ಉದ್ಘಾಟಿಸಿ, ಸಮಾಜಮುಖಿ ಕವಿತೆಗಳ ರಚನೆಗೆ ಕವಿಗಳು ಆದ್ಯತೆ ನೀಡುವಂತೆ ಸಲಹೆ ನೀಡಿದರು. ಕವಿಗೋಷ್ಠಿಗೆ ಚಾಲನೆ ನೀಡಿದ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ, ಸಾಹಿತ್ಯ ಪರಂಪರೆಯಲ್ಲಿ ಕವಿತೆಗಳ ಪಾತ್ರ ಮಹತ್ತರವಾದುದ್ದು ಎಂದರು.

ಗ್ರಾಮ ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಿ.ಕಿರಣ್ ಕುಮಾರ್ ಚಿಣ್ಣರನುಡಿ ಮಕ್ಕಳ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಹಿರಿಯ ಸಾಹಿತಿ ಶಿ.ಕುಮಾರಸ್ವಾಮಿ, ಅತ್ತಿಗುಪ್ಪೆ ಸಾಹಿತ್ಯ ಬಳಗದ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಕತ್ತರಘಟ್ಟವಾಸು, ಕವಿಗಳಾದ ಕನ್ನಡ ನಾಗರಾಜು, ಶ್ರೀಕಾಂತ್ ಚಿಮ್ಮಲ್, ಡಿ.ನಾರಾಯಣಸ್ವಾಮಿ, ಎಚ್.ಎಂ.ಗಂಗಾಧರ ಶೆಟ್ಟಿ, ಸವಿತಾ ರಮೇಶ್, ಸುಧಾಮಣಿ ಲಕ್ಷ್ಮಣಗೌಡ, ವಿ.ಜಿ.ಮಲ್ಲಿಕಾರ್ಜುನಸ್ವಾಮಿ, ಬಿಂದುಶ್ರೀ ಸೇರಿದಂತೆ 15 ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು.