ಸಾರಾಂಶ
ಪೆನ್‌ಡ್ರೈವ್ ಕೇಸ್ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ತಕ್ಷಣ ವಾಪಸಾಗಿ ತನಿಖಾ ತಂಡಕ್ಕೆ ಸಹಕಾರ ನೀಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮೂಲಕ ಸಂದೇಶ ನೀಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಶ್ಲೀಲ ವಿಡಿಯೋ ಪ್ರಕರಣ ಬಯಲಾಗುತ್ತಿದ್ದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ತಕ್ಷಣ ವಾಪಸಾಗಿ ತನಿಖಾ ತಂಡಕ್ಕೆ ಸಹಕಾರ ನೀಡುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳ ಮೂಲಕ ಸಂದೇಶ ನೀಡಿದ್ದಾರೆ.ಸೋಮವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಜ್ವಲ್ ಎಲ್ಲಿದ್ದರೂ ಎಸ್ಐಟಿ ಮುಂದೆ ಹಾಜರಾಗಲು ಮನವಿ ಮಾಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಬಳಿಯೂ ಕೇಳಿಕೊಂಡಿದ್ದೇನೆ. ಇದರಿಂದ ನಮ್ಮ ಕುಟುಂಬದ ಬಗ್ಗೆ ತಪ್ಪು ಅಭಿಪ್ರಾಯ ಮೂಡಬಾರದು. ದೇಶಕ್ಕೆ ವಾಪಸ್ ಬಂದು ತನಿಖೆಗೆ ಸಹಕಾರ ಕೊಡಬೇಕು. ಕಾನೂನು ಪ್ರಕಾರ ಪ್ರಕರಣವನ್ನು ಎದುರಿಸಬೇಕು ಎಂದು ಹೇಳಿದರು.
ಪ್ರಜ್ವಲ್ ಹಾಜರಾಗಲು ಒಂದು ವಾರ ಸಮಯ ಕೇಳಿದಾಗ ಎಸ್ಐಟಿ ಅವಕಾಶ ಕೊಡಬಹುದಿತ್ತಾದರೂ, ನೀಡಲಿಲ್ಲ. ಪದ್ಮನಾಭನಗರಕ್ಕೆ ಪ್ರಜ್ವಲ್ ರಕ್ಷಣೆಯ ಬಗ್ಗೆ ಚರ್ಚೆ ಮಾಡಲು ಹೋಗುತ್ತಿಲ್ಲ. ತಂದೆ-ತಾಯಿಯ ನೋವಿನ ಹಿನ್ನೆಲೆಯಲ್ಲಿ ಆತ್ಮಸ್ಥೈರ್ಯ ತುಂಬಲು ಹೋಗುತ್ತಿದ್ದೇನೆ. ಪ್ರಕರಣದ ಹಿನ್ನೆಲೆಯಲ್ಲಿ ದೇವೇಗೌಡ ಅವರು ರಾಜ್ಯಸಭೆಗೆ ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ನಾನೇ ತಡೆದಿದ್ದೆ ಎಂದರು.ಕ್ಷಮೆ ಕೇಳಿದ ಕುಮಾರಸ್ವಾಮಿ:
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದ ವರದಿ ನೋಡಿ ಮನಸ್ಸಿಗೆ ನೋವಾಯಿತು. ದೀರ್ಘ ರಜೆ ತೆಗೆದುಕೊಳ್ಳುವುದಕ್ಕೆ ಮಹಿಳಾ ಸಿಬ್ಬಂದಿ ಹಿಂಜರಿಯುತ್ತಿದ್ದಾರೆ ಎನ್ನುವ ಆ ವರದಿ ಮನಸ್ಸಿಗೆ ಘಾಸಿ ಉಂಟುಮಾಡಿದೆ. ಮಾನಸಿಕ ಯಾತನೆ ಅನುಭವಿಸುತ್ತಿರುವ ಮಹಿಳೆಯರಲ್ಲಿ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಭಾವುಕರಾದರು.ನೊಂದ ಹೆಣ್ಣುಮಕ್ಕಳು ದಯಮಾಡಿ ಕುಗ್ಗಬಾರದು. ನಮ್ಮ ಕುಟುಂಬದಿಂದ, ಪ್ರಜ್ವಲ್‌ನಿಂದ ತಪ್ಪಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರುತ್ತೇನೆ. ಯಾವುದೇ ಕಾರಣಕ್ಕೂ ಭಯಪಡಬೇಕಾಗಿಲ್ಲ. ಅವರ ಪರ ಹೋರಾಡುತ್ತೇನೆ ಎಂದರು.