ಪ್ರಜ್ವಲ್ ಕೂಡಲೇ ಕಾನೂನಿಗೆ ಶರಣಾಗಲಿ: ಸಂದೇಶ್

| Published : May 29 2024, 12:46 AM IST

ಸಾರಾಂಶ

ಮೇ ೩೧ ರಂದು ಎಸ್.ಐ.ಟಿ.ಗೆ ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ ಹೇಳಿದ್ದು, ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು. ಈ ಕಾನೂನನ್ನು ಗೌರವಿಸಬೇಕು ಎಂದು ಉಗ್ರವಾಗಿ ಒತ್ತಾಯ ಮಾಡುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಲೈಂಗಿಕ ಹಗರಣಕ್ಕೆ ಸಂಬಂಧಿಸಿ ಮೇ 30ರಂದು ಪ್ರಜ್ವಲ್ ರೇವಣ್ಣ ವಿರುದ್ಧದ ಹೋರಾಟಕ್ಕೆ ರಾಜ್ಯಾದ್ಯಂತ ಹೋರಾಟಗಾರರು ಆಗಮಿಸಲಿದ್ದು, ಎಲ್ಲಾ ರೀತಿಯ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಕೂಡಲೇ ಪ್ರಜ್ವಲ್ ರೇವಣ್ಣ ಕಾನೂನಿಗೆ ಶರಣಾಗುವಂತೆ ಜನಪರ ಚಳುವಳಿಗಳ ಒಕ್ಕೂಟದ ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಕುರಿತಂತೆ ನಡೆಸಿರುವ ಲೈಂಗಿಕ ರಾಸಲೀಲೆ, ಇದಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ವಿತರಿಸಿದವರನ್ನೂ ಬಂಧಿಸಿ, ಕಾನೂನಿನಡಿ ತರಬೇಕೆಂದು ಮೇ ೩೦ರಂದು ಜನಪರ ಚಳುವಳಿಗಳ ಒಕ್ಕೂಟವು ಹಮ್ಮಿಕೊಂಡಿರುವ ಬೃಹತ್ ಹೋರಾಟದಲ್ಲಿ ‘ನಮ್ಮೆಲ್ಲರ ಹೋರಾಟದ ನಡಿಗೆ ಹಾಸನದ ಕಡೆಗೆ’ ಎಂಬ ಘೋಷ ವಾಕ್ಯದೊಂದಿಗೆ ಈಗಾಗಲೇ ನಾವೆಲ್ಲಾ ಬಹಳಷ್ಟು ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ, ರಾಜ್ಯದ ಎಲ್ಲಾ ಮನುಷ್ಯತ್ವ ಇರುವವರು, ಸಾಮಾಜಿಕ ಚಿಂತಕರು ಹೋರಾಟಗಾರರು, ಸಾಹಿತಿಗಳು, ಬರಹಗಾರರು, ಮಹಿಳಾ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘಟನೆಗಳು ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರವು ಮೊದಲೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದರೆ ಹೋರಾಟಗಾರರು ಇಷ್ಟೊಂದು ಶ್ರಮ ಪಡಬೇಕಾಗಿರಲಿಲ್ಲ ಎಂದರು.

ಈ ಹೋರಾಟವು ಮಹಾರಾಜ ಪಾರ್ಕಿನ ಬಳಿಯಿಂದ ಪ್ರಾರಂಭವಾಗಲಿದೆ. ಈ ವೇಳೆ ಅಂಬೇಡ್ಕರ್, ಬುದ್ಧ, ಬಸವ ಇತರರ ಭಾವಚಿತ್ರವನ್ನು ಪ್ರದರ್ಶಿಸಲಾಗುವುದು. ಮಹಿಳೆಯರ ಅಶ್ಲೀಲ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ. ಒಟ್ಟಾರೆ ಈ ಪ್ರಕರಣದಲ್ಲಿ ವೀಡಿಯೋ ಮಾಡಿದ ಆರೋಪಿ ಹಾಗೂ ವೀಡಿಯೋ ಹರಿಬಿಟ್ಟ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಮೇ ೩೧ ರಂದು ಎಸ್.ಐ.ಟಿ.ಗೆ ಹಾಜರಾಗುವುದಾಗಿ ಪ್ರಜ್ವಲ್ ರೇವಣ್ಣ ಹೇಳಿದ್ದು, ತಪ್ಪಿಸಿಕೊಳ್ಳುವ ಕೆಲಸ ಮಾಡಬಾರದು. ಈ ಕಾನೂನನ್ನು ಗೌರವಿಸಬೇಕು ಎಂದು ಉಗ್ರವಾಗಿ ಒತ್ತಾಯ ಮಾಡುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜನಪರ ಚಳುವಳಿಗಳ ಒಕ್ಕೂಟದ ಎಂ. ಸೋಮಶೇಖರ್, ಎಸ್.ಎಲ್. ಮಲ್ಲಪ್ಪ, ವಿಜಯಕುಮಾರ್, ರಾಜಶೇಖರ್, ಎಂ.ಜಿ. ಪೃಥ್ವಿ ಇತರರು ಉಪಸ್ಥಿತರಿದ್ದರು.