ಜನಸಂಪರ್ಕ ಸಭೆ ಪರಿಹಾರದ ವೇದಿಕೆಯಾಗಲಿ: ಶಾಸಕ ತಮ್ಮಯ್ಯ

| Published : Jan 21 2024, 01:31 AM IST

ಸಾರಾಂಶ

ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದ ಚಿಕ್ಕಮಗಳೂರು ಕಸಬಾ ಹೋಬಳಿ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ತಮ್ಮಯ್ಯ ಜನಸಂಪರ್ಕ ಸಭೆಗಳು ಕಾಟಾಚಾರದ ಸಭೆಗಳಾಗದೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರದ ವೇದಿಕೆಯಾಗಲಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಜನಸಂಪರ್ಕ ಸಭೆಗಳು ಕಾಟಾಚಾರದ ಸಭೆಗಳಾಗದೇ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆಯಾಗಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಚಿಕ್ಕಮಗಳೂರು ಕಸಬಾ ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತ ನಾಡಿ, ಜನಸಾಮಾನ್ಯರ ಸಮಸ್ಯೆಗಳನ್ನು ಕೇಳಿ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳುವುದು, ಕ್ಲಿಷ್ಟಕರವಾದ ಸಮಸ್ಯೆಗಳಿಗೆ ನಿಗದಿತ ಸಮಯದೊಳಗೆ ಪರಿಹಾರ ನೀಡಬೇಕು, ಈ ಮೂಲಕ ಜನಸ್ನೇಹಿ ಆಡಳಿತ ನೀಡಬೇಕು ಎನ್ನುವುದು ಜನ ಸಂಪರ್ಕ ಸಭೆಯ ಉದ್ದೇಶವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ನಡೆಯುವ ಒಳ್ಳೆಯ ಕೆಲಸಗಳನ್ನು ಗಮನಿಸುತ್ತೇನೆ. ಲೋಪಗಳು ಕಂಡುಬಂದಲ್ಲಿ ಮುಂದಿನ ಸಭೆ ವೇಳೆಗೆ ಸರಿಪಡಿಸಿಕೊಳ್ಳಲು ಹೇಳುತ್ತೇನೆ. ಅದಕ್ಕೆ ಮುಂಚಿತವಾಗಿ ಅಧಿಕಾರಿಗಳು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡು ಜನ ಸಂಪರ್ಕ ಸಭೆಗಳಲ್ಲಿ ಬರುವ ಸಮಸ್ಯೆಗಳನ್ನು ಆದಷ್ಟು ಸ್ಥಳದಲ್ಲೇ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ಮಾಡಬೇಕು ಎಂದರು. ಮಲ್ಲೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಕಾಮೇನಹಳ್ಳಿ, ಕುಮರಗಿರಿ ಸುತ್ತಮುತ್ತಲಿನ ಕುಂಬಗತ್ತಿ, ಹೂವಿನಹಳ್ಳಿ ಹೊಸೂರು ಇನ್ನಿತರೆ ಭಾಗದ 250 ಹೆಚ್ಚು ಕುಟುಂಬಗಳ ಮನೆ ಹಾಗೂ ಜಮೀನಿಗೆ ದಾಖಲೆಗಳಿಲ್ಲ. ಬಹಳಷ್ಟು ಪ್ರಕರಣಗಳು ಸೆಕ್ಷನ್ 4 ರಲ್ಲಿ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ. ಈ ಬಗ್ಗೆ ಸದನದಲ್ಲೂ ಪ್ರಸ್ತಾಪಿ ಸಿದ್ದೇನೆ. ಈಗ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕೆ ಪ್ರಯತ್ನ ಮಾಡಿದ್ದೇನೆ ಎಂದು ಹೇಳಿದರು. ಇತಿಹಾಸದಲ್ಲಿ ಚಿಕ್ಕಮಗಳೂರಿನ ಮಲೆನಾಡಿನ ಭಾಗದಲ್ಲಿ ಅರಣ್ಯ ಮತ್ತು ಕಂದಾಯ ಇಲಾಖೆ ನಡುವೆ ಸಾಕಷ್ಟು ಗೊಂದಲಗಳಿವೆ. ಕಾಫಿ ಬೆಳೆಯುವ ಪ್ರದೇಶದಲ್ಲಿ ಒತ್ತುವರಿದಾರರಿದ್ದಾರೆ ಎನ್ನುತ್ತಾರೆ. ಆದರೆ ಒತ್ತುವರಿ ಎನ್ನುವ ಪದವೇ ತಪ್ಪು. ಆ ಪದವನ್ನೇ ಬಳಸಬಾರದು .ಅದು ಬಗರ್ ಹುಕುಂ ಆಗಿರುತ್ತದೆ. ಬದುಕಿಗಾಗಿ ಸಾಗುವಳಿ ಮಾಡಿದ ಕಾರಣ ಅವರನ್ನು ಸಾಗುವಳಿದಾರರು ಎಂದು ಹೇಳಲು ಬಯಸುತ್ತೇನೆ ಎಂದು ತಿಳಿಸಿದರು. ಇದಲ್ಲದೆ, ಸಾರ್ವಜನಿಕ ಉದ್ದೇಶಕ್ಕೂ ಭೂಮಿ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ಹೋದರೂ ಡೀಮ್ಡ್‌ ಅರಣ್ಯ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮಜಿಲ್ಲೆಯ ಐದೂ ಮಂದಿ ಶಾಸಕರು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಿ ಮುಖ್ಯಮಂತ್ರಿಗಳ ಮೇಲೆ ಒತ್ತಡತಂದ ಪರಿಣಾಮ ಇತಿಹಾಸದಲ್ಲೇ ಮೊದಲ ಬಾರಿಗೆ ಇಡೀ ರಾಜ್ಯದಲ್ಲೇ ನಮ್ಮಜಿಲ್ಲೆಗೆ 15 ಸರ್ವೇಯರುಗಳನ್ನು ನೇಮಿಸಿ ಕಂದಾಯ ಮತ್ತು ಅರಣ್ಯಇಲಾಖೆಯ ಜಂಟಿ ಸರ್ವೇ ಕಾರ್ಯ ಪ್ರಾರಂಭಿಸಿದ್ದೇವೆ ಎಂದು ಹೇಳಿದರು. ಜಂಟೀ ಸರ್ವೇ ಆದ ನಂತರ ಕಂದಾಯ ಭೂಮಿ ಹಾಗೂ ಅರಣ್ಯ ಭೂಮಿಯನ್ನು ಬೇರ್ಪಪಡಿಸಿದ ನಂತರ ಸಾಗುವಳಿ ಮಾಡಿರುವವರಿಗೆ ದಾಖಲೆ ಮಾಡಿಕೊಡಲು ಸಾಧ್ಯವಾಗುತ್ತದೆ. ಸರ್ಕಾರಿ ಉಪಯೋಗಕ್ಕೆ ಅಗತ್ಯ ವಿರುವ ಜಮೀನನ್ನೂ ಮೀಸಲಿಡಲು, ಮಂಜೂರು ಮಾಡಲು ಸಾಧ್ಯವಾಗುತ್ತದೆ ಎಂದು ಭರವಸೆ ನೀಡಿದರು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ನಮ್ಮೊಳಗೆ ಒಬ್ಬರು ಅಂದುಕೊಳ್ಳುವುದಿಲ್ಲ. ಆಕಾಶದಿಂದ ಬಂದಿದ್ದೇವೆ ಎಂದು ತಿಳಿದಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರೇ ಅರಣ್ಯ ಸಚಿವರೆದುರು ಈ ಮಾತು ಹೇಳಿದ್ದಾರೆ ಶಾಸಕರು ಹೇಳಿದರು. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಲ್ಲಿ 5 ಗ್ಯಾರಂಟಿಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿದೆ. ಇಂತಹ ಯಶಸ್ವಿ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾ.ಪಂ. ಇಓ ತಾರಾನಾಥ್, ಜಿ.ಪಂ. ಉಪ ಕಾರ್ಯದರ್ಶಿ ಅತೀಕ್‌ ಅಹಮದ್, ತಹಸೀಲ್ದಾರ್ ಡಾ. ಸುಮಂತ್, ಮಲ್ಲೇಹಳ್ಳಿ ಗ್ರಾ.ಪಂ.ಅಧ್ಯಕ್ಷೆ ಸುನಿತಾ, ಹೋಬಳಿ ವ್ಯಾಪ್ತಿಯ ವಿವಿಧ ಪಂಚಾಯ್ತಿಗಳ ಅಧ್ಯಕ್ಷರು, ಬಗರ್ ಹುಕ್ಕುಂ ಸಮಿತಿ ಸದಸ್ಯೆ ಅನ್ನಪೂರ್ಣ ಶಿವಾನಂದ್ ಭಾಗವಹಿಸಿದ್ದರು.