ಮೊದಲು ಗೌರವಕೊಟ್ಟು ಮಾತನಾಡುವುದನ್ನು ರೆಡ್ಡಿ ಕಲಿಯಲಿ: ಕರಡಿ

| Published : Apr 22 2024, 02:15 AM IST

ಮೊದಲು ಗೌರವಕೊಟ್ಟು ಮಾತನಾಡುವುದನ್ನು ರೆಡ್ಡಿ ಕಲಿಯಲಿ: ಕರಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕಾರಣದಲ್ಲಿ ಟೀಕೆ-ಟಿಪ್ಪಣೆ ಸಹಜ. ಆದರೆ, ಶಾಸಕ ಜನಾರ್ದನರೆಡ್ಡಿ ಮೊದಲು ಗೌರವಕೊಟ್ಟು ಮಾತನಾಡುವುದನ್ನು ಕಲಿಯಲಿ

ಕನ್ನಡಪ್ರಭ ವಾರ್ತೆ ಕಾರಟಗಿ

ರಾಜಕಾರಣದಲ್ಲಿ ಟೀಕೆ-ಟಿಪ್ಪಣೆ ಸಹಜ. ಆದರೆ, ಶಾಸಕ ಜನಾರ್ದನರೆಡ್ಡಿ ಮೊದಲು ಗೌರವಕೊಟ್ಟು ಮಾತನಾಡುವುದನ್ನು ಕಲಿಯಲಿ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ತಾಕೀತು ಮಾಡಿದರು.

ತಾಲೂಕಿನ ಸಿದ್ದಾಪುರ ಮತ್ತು ಮರ್ಲಾನಹಳ್ಳಿಯಲ್ಲಿ ನಡೆದ ಸಿದ್ದಾಪುರ ಮತ್ತು ಯರಡೋಣಾ ಜಿಪಂ ವ್ಯಾಪ್ತಿಯ ಕಾಂಗ್ರೆಸ್ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕರಡಿ ಸಂಗಣ್ಣನಂಥವರು ಹೋದರೆ ಅಂಥವರು ನಮ್ಮಲ್ಲಿ ಸಾವಿರ ಜನ ಇದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ. ಜನಾರ್ದನ ರೆಡ್ಡಿಯವರು ಒಂದು ತರಹ ಫ್ಲೈಯಿಂಗ್ ಬರ್ಡ್ ಇದ್ದಂತೆ. ಸೀಸನ್ ಬಂದಾಗ ಬರ್ತಾರೆ ಮತ್ತೆ ಹೋಗಿ ಬಿಡ್ತಾರೆ. ಇಂಥವರು ಪರ್ಮಿನೆಂಟ್ ರಾಜಕಾರಣಿಗಳಲ್ಲ. ಅವರು ಗೌರವ ಕೊಟ್ಟು ಮಾತನಾಡುವುದನ್ನು ಕಲಿತುಕೊಳ್ಳಬೇಕು ಎಂದರು.

ಟಿಕೆಟ್ ತಪ್ಪಿಸಿದ್ದು ಯಾಕೆ?: ನನಗೆ ಬಿಜೆಪಿಯವರು ಏಕೆ ಟಿಕೆಟ್ ನೀಡಲಿಲ್ಲ. ನಾನೇನು ಕೋಟ್ಯಂತರ ರು. ಲೂಟಿ ಮಾಡಿದ್ದೇನೇಯೇ ? ಅಥವಾ ಜೂಜು, ಇಸ್ಪೀಟ್ ಆಡಿ ಸಮಯ ಕಳೆದಿದ್ದೇನೆಯೇ?, ಏಕೆ? ನನಗೆ ಟಿಕೆಟ್ ನೀಡದೇ ವಂಚಿಸಿದ್ದು ಬಿಜೆಪಿ. ಇದರ ಬಗ್ಗೆ ನನಗೆ ಉತ್ತರ ಕೊಡಿ ಎಂದು ಎಷ್ಟು ಕೇಳಿದರೂ ಉತ್ತರ ಕೊಡಲಿಲ್ಲ. ಇಷ್ಟಲ್ಲದೇ ೨೦೧೮ರಲ್ಲಿ ಸಿ.ವಿ. ಚಂದ್ರಶೇಖರ್ ಅವರಿಗೆ ಟಿಕೆಟ್ ಘೋಷಣೆ ಮಾಡಬೇಕಾದರೆ ನನ್ನನ್ನು ಒಂದು ಮಾತು ಕೇಳಲಿಲ್ಲ. ೨೦೨೩ರ ಚುನಾವಣೆಗೆ ಸ್ಪರ್ಧಿಸಲು ನಮ್ಮ ಕುಟುಂಬಕ್ಕೆ ಆಸಕ್ತಿ ಇಲ್ಲದಿದ್ದರೂ ಪಂಚಮಸಾಲಿ ಸಮಾಜಕ್ಕೆ ಟಿಕೆಟ್ ನೀಡಬೇಕೆಂಬ ಉದ್ದೇಶದಿಂದ ಊರೆಲ್ಲ ಸುತ್ತಿ ಬಂದರು. ಆದರೆ, ಯಾರೂ ಸಿಗದಿದ್ದಾಗ ಮಹಿಳಾ ಕೋಟಾದಡಿ ನನ್ನ ಸೊಸೆಗೆ ಟಿಕೆಟ್ ಕೊಟ್ಟು ಮತ್ತೆ ಸಮಾಜದಲ್ಲಿ ನಮ್ಮ ಬಗ್ಗೆಯೇ ತಪ್ಪು ತಿಳುವಳಿಕೆ ಮೂಡುವ ಹಾಗೇ ಮಾಡಿ ವಿಲನ್ ಮಾಡಿದಿರಿ ಎಂದು ಬಿಜೆಪಿಯವರ ಮೇಲೆ ಹರಿಹಾಯ್ದರು.

ಪಕ್ಷದಲ್ಲಿ ಕನಿಷ್ಠ ಸೌಜನ್ಯ ಮರೆಯಾಗಿದೆ. ಇವೆಲ್ಲದ್ದರಿಂದ ಸ್ವಾಭಿಮಾನಕ್ಕೆ ಧಕ್ಕೆಯಾದ್ದರಿಂದ ಪಕ್ಷ ತೊರೆದಿದ್ದೇನೆ. ಟಿಕೆಟ್ ಕೈ ತಪ್ಪಿದ್ದಕ್ಕಲ್ಲ ಎಂದು ಸ್ಪಷ್ಪಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ಅದೇ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ರಚನೆ ಆಗಬೇಕಾದರೆ ನೀವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಅವರಿಗೆ ಮತ ಚಲಾಯಿಸಬೇಕು ಎಂದು ತಿಳಿಸಿದರು.

ಬಳಿಕ ಸಚಿವ ಶಿವರಾಜ ತಂಗಡಗಿ, ಕಾಡಾ ಅಧ್ಯಕ್ಷ ಹಸನ ಸಾಬ್ ದೋಟಿಹಾಳ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಮಾತನಾಡಿದರು.

ಈ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದೊಡ್ಡಪ್ಪ ದೇಸಾಯಿ, ಹನುಮೇಶ ನಾಯಕ್, ಶಶಿಧರಗೌಡ ಪಾಟೀಲ್, ಶಿವರೆಡ್ಡಿ ನಾಯಕ್, ಶರಣೇಗೌಡ ಮಾ.ಪಾ, ಡಾ. ಕೆ.ಎನ್. ಪಾಟೀಲ್, ಶೈಲಜಾ ಹಿರೇಮಠ, ಸಿ.ಎಚ್. ರಾಮಕೃಷ್ಣ, ವಿರೂಪಣ್ಣ ದೊಡ್ಡಮನಿ, ಶರಣಬಸವರೆಡ್ಡಿ, ಚಂದ್ರಶೇಖರ ಪಲ್ಲೇದ್, ಸುಧೀರ್, ಶ್ರೀಹರಿ, ಗ್ರಾಪಂ ಸದಸ್ಯೆ ದೀಪಾ ರಾಥೋಡ್ ಇತರರು ಇದ್ದರು

ಕೆ. ಪರಸಪ್ಪ, ಸೋಮನಾಥ್ ದೊಡ್ಡಮನಿ, ರವಿನಂದಾ, ಎನ್. ಪ್ರತಾಪ್, ರಮೇಶ್ ಕುಂಟೋಜಿ ಕಾರ್ಯಕ್ರಮ ನಿರ್ವಹಿಸಿದರು.