ಸಾರಾಂಶ
ಕನ್ನಡಪ್ರಭವಾರ್ತೆ ಗುಳೇದಗುಡ್ಡ
ಧರ್ಮ ಎಲ್ಲರ ಆಸ್ತಿಯಾಗಬೇಕು. ಅದು ಯಾವುದೊಂದು ಪಕ್ಷದ ಆಸ್ತಿಯಾಗಬಾರದು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.ಅವರು ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಸ್ವಾಮೀಜಿಯವರ 38ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಮಠಗಳು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ಪರಿಸರ ನಿರ್ಮಾಣ ಮಾಡಬೇಕು. ಆ ಹೆಜ್ಜೆಯನ್ನು ಶ್ರೀಮಠ ಮಾಡುತ್ತಿದೆ. ಮಾನವ ಧರ್ಮ ಶ್ರೇಷ್ಠವಾಗಿದೆ. ಆಹಾರ, ವಾಯು, ನೀರು, ಸಂಸ್ಕಾರ, ಸಂಸ್ಕೃತಿ ಇಂದು ಕಲುಷಿತವಾಗಿದೆ. ಇದನ್ನು ಪರಿಶುದ್ಧಗೊಳಿಸುವ ಅಗತ್ಯತೆ ಇಂದು ಹೆಚ್ಚಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ವಿಶೇಷ ಉಪನ್ಯಾಸ ನೀಡಿ, ಜಾತಿ, ಧರ್ಮ ಮೀರಿ ಎಲ್ಲ ಜಾತಿ ಜನಾಂಗದವರನ್ನು ಒಪ್ಪಿ ಅಪ್ಪಿಕೊಂಡು ಸುಂದರ, ಸೌಹಾರ್ಧಯುತ ಸಮಾಜ ಕಟ್ಟುವ ಕಾಯಕದಲ್ಲಿ ನಿರತವಾದ ಶ್ರೀಮಠದ ಸಮಾಜಮುಖಿ, ಜಾತಿ ರಹಿತ ಕೆಲಸ ಮೆಚ್ಚುವಂತದ್ದು ಎಂದರು.ಇದೇ ಸಂದರ್ಭದಲ್ಲಿ ಶಿವಶರಣ ಮಾದರ ಚೆನ್ನಯ್ಯನ ಜಯಂತಿ ಮಹೋತ್ಸವ ಆಚರಿಸಲಾಯಿತು. ಶ್ರೀ ಚಿಕ್ಕರೇವಣಸಿದ್ದ ಶಿವಶರಣ ಶ್ರೀಗಳವರ ಸ್ಮಾರಕ ಮಂಟಪವನ್ನು ಆಳಂದದ ಸದ್ಗುರು ರೇವಣಸಿದ್ದ ಶ್ರೀಮಠದ ಚನ್ನಬಸವ ಪಟ್ಟದೇವರು ಉದ್ಘಾಟಿಸಿದರು.
ಚಿತ್ರದುರ್ಗದ ಚಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಶ್ರೀಗಳು ಅಧ್ಯಕ್ಷತೆವಹಿಸಿ ಮಾತನಾಡಿ ,ನಾವೆಲ್ಲರೂ ಇಂದಿಗೂ ಉತ್ತಮ ಮನೆ ಕಟ್ಟಿಕೊಂಡಿಲ್ಲ, ನಾವು ರಾಜಕೀಯ ನಾಯಕರಿಂದ, ಹಣ, ವಸ್ತ್ರ, ಮುಂತಾದವುಗಳನ್ನು ಪಡೆದು ಅವರನ್ನು ಅಭಿವೃದ್ಧಿ ಪರ ಪ್ರಶ್ನಿಸಲಾರದ ಸ್ಥಿತಿಗೆ ಬಂದಿದ್ದೇವೆ. ಇದರಿಂದ ನಮ್ಮ ಗ್ರಾಮಗಳು ಹಿಂದುಳಿಯಲು ಕಾರಣವಾಗಿವೆ. ನಾವೇಲ್ಲರೂ ನೈತಿಕ ಸದೃಢತೆ ಹೊಂದಬೇಕೆಂದರು.ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ಚಂದ್ರಶೇಖರ ಹೆಗಡೆ ಸಂಪಾದಿಸಿರುವ ಶ್ರವಣೋತ್ಸವ ಪುಸ್ತಕ ಲೋಕಾರ್ಪಣೆಗೊಂಡಿತು. ಮತ್ತು ಅಖಂಡ 15 ದಿನಗಳವರೆಗೆ ಪ್ರವಚನ ನೀಡಿದ ಶ್ರೀಅಭಿನವ ಒಪ್ಪತ್ತೇಶ್ವರ ಶ್ರೀಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶ್ರೀ ಗುರುಬಸವ ದೇವರು, ಸ್ವಾಗತ ಸಮೀತಿ ಅಧ್ಯಕ್ಷ ಸಂಗನಬಸಪ್ಪ ಚಿಂದಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ನಾಗೇಶಪ್ಪ ಪಾಗಿ, ಗೌರಮ್ಮ ಕಲಬುರ್ಗಿ, ಪಿಎಸ್ಐ ಲಕ್ಷ್ಮಪ್ಪ ಆರಿ ಮುಂತಾದವರಿದ್ದರು.