ಸಂಶೋಧಕರು ಪ್ರಾಕೃತಿಕ ವಿಕೋಪಗಳ ಸವಾಲುಗಳಿಗೆ ಪರಿಹಾರ ಹುಡುಕಲಿ

| Published : Aug 31 2024, 01:42 AM IST

ಸಂಶೋಧಕರು ಪ್ರಾಕೃತಿಕ ವಿಕೋಪಗಳ ಸವಾಲುಗಳಿಗೆ ಪರಿಹಾರ ಹುಡುಕಲಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಹೆಚ್ಚಾದ ಜನಸಂಖ್ಯೆ ಹಾಗೂ ಪ್ರಾಕೃತಿಕ ವಿಕೋಪಗಳ ಸವಾಲುಗಳಿಗೆ ಸುಸ್ಥಿರ ಪರಿಹಾರ ನೀಡುವುದು ಸಂಶೋಧಕರ ಆದ್ಯ ಕರ್ತವ್ಯವಾಗಿದೆ ಎಂದು ಐಐಟಿ ಮದ್ರಾಸ್ನ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಮೋಹಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದಲ್ಲಿ ಹೆಚ್ಚಾದ ಜನಸಂಖ್ಯೆ ಹಾಗೂ ಪ್ರಾಕೃತಿಕ ವಿಕೋಪಗಳ ಸವಾಲುಗಳಿಗೆ ಸುಸ್ಥಿರ ಪರಿಹಾರ ನೀಡುವುದು ಸಂಶೋಧಕರ ಆದ್ಯ ಕರ್ತವ್ಯವಾಗಿದೆ ಎಂದು ಐಐಟಿ ಮದ್ರಾಸ್‌ನ ಪ್ರಾಧ್ಯಾಪಕ ಪ್ರೊ.ಎಂ.ಎಸ್.ಮೋಹಕುಮಾರ ಹೇಳಿದರು.

ಅವರು ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಸಭಾಭವನದಲ್ಲಿ ನಡೆದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸುಸ್ಥಿರ ಪರಿಹಾರಗಳು (ಎಸ್.ಎಸ್.ಇ.ಟಿ-2024) ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ದೇಶವು ಇಂದು ಜನಸಂಖ್ಯೆಯ ತೀವ್ರ ಹೆಚ್ಚಳ ಹಾಗೂ ಹವಾಮಾನ ಬದಲಾವಣೆಯಂತಹ ಸನ್ನಿವೇಶಗಳಲ್ಲಿ ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ, ಉತ್ತಮ ಆರೋಗ್ಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ತಂತ್ರಜ್ಞರು ಸೂಕ್ತವಾದ ತಾಂತ್ರಿಕ ಯೋಜನೆಗಳನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಿ ಸಮುದಾಯಕ್ಕೆ ಪರಿಹಾರಗಳನ್ನು ನೀಡುವುದು ಬಹಳ ಮುಖ್ಯವಾಗಿದೆ. ಯುವ ಸಂಶೋಧಕರು ಹೊಸ ಹೊಸ ವಿಚಾರಗಳನ್ನು ಕಲಿತು ಅನುಷ್ಠಾನಗೊಳಿಸಬೇಕು. ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಇಂತಹ ಸಮ್ಮೇಳನಗಳನ್ನು ಆಯೋಜಿಸಿ ಶೈಕ್ಷಣಿಕ ಮತ್ತು ಸಂಶೋಧನಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

ಇನ್ನೋರ್ವ ಗೌರವಾನ್ವಿತ ಅತಿಥಿ ಐಐಟಿ ಧಾರವಾಡದ ಸಂದರ್ಶಕ ಪ್ರಾಧ್ಯಾಪಕ ಹಾಗೂ ಸಲಹೆಗಾರ ಪ್ರೊ.ಕೆ.ವಿ.ಜಯಕುಮಾರ್ ಅವರು ಮಾತನಾಡಿ, ಇಂದಿನಕಾಲದ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರು. ಶಿಕ್ಷಕರು ಇವರ ಬುದ್ಧಿಮತ್ತೆಗನುಗುಣವಾಗಿ ಉನ್ನತವಾದದ್ದನ್ನು ಸಾಧಿಸಲು ಪ್ರೇರಣೆ ನೀಡಬೇಕು. ಏನೇ ಮಾಡಿದರೂ ಬಹಳ ಅದ್ಭುತ್‌ವಾಗಿ, ಚೆನ್ನಾಗಿ ಮಾಡಬೇಕು ಎಂದು ಹೇಳಿದರು.

ಮತ್ತೋರ್ವ ಗೌರವಾನ್ವಿತ ಅತಿಥಿಗಳಾದ ಐಐಟಿ ಮದ್ರಾಸ್ಸಿನ ಪ್ರೊ.ಜಿ ಆರ್ .ದೊಡಗೌಡರು ಸುಸ್ಥಿರತೆಯನ್ನುವುದು ನಮ್ಮ ಜೀವನ ಪದ್ಧತಿಯಲ್ಲಿ ಸಾಕಷ್ಟು ಕಾಣಬಹುದಾಗಿದೆ. ವಿಭಿನ್ನವಾಗಿ ಯೋಚಿಸಿ, ಮನುಕುಲದ ಒಳಿತಿಗಾಗಿ ಹಾಗೂ ಅಭಿವೃದ್ಧಿಗಾಗಿ ಮಾಡುವ ಸಂಶೋಧನಾ ಕೆಲಸ ಬಹಳ ಮುಖ್ಯ ಎಂದು ನುಡಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ವೀಣಾ ಸೋರಗಾವಿ ಅವರು ಕಾಲೇಜಿನ ಅಭಿವೃದ್ಧಿಯ ಕುರಿತು ಮಾತನಾಡಿ, ಇಂತಹ ಸಮ್ಮೇಳನಗಳು ರಾಜ್ಯ, ದೇಶ ,ವಿದೇಶಗಳ ಗಡಿಯಾಚೆಗಿನ ಪ್ರತಿಭಾನ್ವಿತರ ಸಹಭಾಗಿತ್ವದಲ್ಲಿ ಸಂಶೋಧನೆಯನ್ನು ಕೈಗೊಂಡು ವ್ಯವಸ್ಥೆಯನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವುದು ಬಹಳ ಮುಖ್ಯ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಮುಂಚೂಣಿಯಲ್ಲಿದೆ ಎಂದರು.

ಎರಡು ದಿನಗಳ ಸಮ್ಮೇಳನದ ಸಂಯೋಜಕರು ಮತ್ತು ಕಾಲೇಜಿನ (ಆರ್ ಮತ್ತು ಡಿ ) ಡೀನ್ ಡಾ.ಮಹಾಬಳೇಶ ಎಸ್.ಕೆ. ಸಮ್ಮೇಳನದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ವೀರೇಶ ಪಾಗಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು.ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರೊ.ವಿಜಯಲಕ್ಷ್ಮಿ ಜಿಗಜಿನ್ನಿ ನಿರೂಪಿಸಿದರು. ಎಐಎಂಎಲ್ ವಿಭಾಗದ ಮುಖ್ಯಸ್ಥ ಪ್ರೊ.ಅನಿಲ್ ದೇವನಗಾವಿ ವಂದಿಸಿದರು.