ರೋಟರಿ ಮಾಜಿ ಅಧ್ಯಕ್ಷರು ಅನುಭವವನ್ನು ಅಮೃತವಾಗಿಸಲಿ

| Published : Jan 09 2024, 02:00 AM IST

ಸಾರಾಂಶ

ರೋಟರಿ ಕ್ಲಬ್‌ ಸಮಾಜ ಸೇವೆಯಲ್ಲಿ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ. ಸೇವೆಯನ್ನೇ ಧ್ಯೇಯವಾಗಿಸಿಕೊಂಡಿದೆ. ಎಲ್ಲ ಕ್ಷೇತ್ರಗಳ ಸೇವಾ ಕಾಳಜಿ ಜನರ ಹೊಂದಿರುವ ಸಂಸ್ಥೆ. ಆದ್ದರಿಂದ ರೋಟರಿ ಕ್ಲಬ್‌ ಅಧ್ಯಕ್ಷರು ತಮ್ಮ ಒಂದು ವರ್ಷದ ಆಡಳಿತದ ಅವಧಿಯ ಅನುಭವವನ್ನು ಅಮೃತದಂತೆ ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು ಎಂದು ರೋಟರಿ ಜಿಲ್ಲೆ 3170ದ ಮಾಜಿ ಗವರ್ನರ್ ಡಾ. ಪ್ರಾಣೇಶ್ ಜಾಗೀರ್ ದಾರ್ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗರೋಟರಿ ಕ್ಲಬ್‌ ಅಧ್ಯಕ್ಷರು ಒಂದು ವರ್ಷದ ಆಡಳಿತದ ಅವಧಿಯಲ್ಲಿ ತಮ್ಮ ಸಂಪೂರ್ಣ ಸಮಯ ರೋಟರಿಗಾಗಿ ಮೀಸಲಿಟ್ಟು ಕ್ಲಬ್ ಸದಸ್ಯತ್ವದ ವೃದ್ಧಿ, ಸದಸ್ಯರ ನಡುವೆ ಒಡನಾಟ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಹೆಚ್ಚಿಸುವಲ್ಲಿ ಸಾಕಷ್ಟು ಶ್ರಮ ಹಾಕುವುದರ ಜೊತೆಗೆ ವೈಶಿಷ್ಟಪೂರ್ಣ ಅನುಭವ ಪಡೆದಿದ್ದಾರೆ. ಈ ಅನುಭವವನ್ನು ಅಮೃತದಂತೆ ಮುಂದಿನ ಪೀಳಿಗೆಗೆ ಧಾರೆ ಎರೆಯಬೇಕು ಎಂದು ರೋಟರಿ ಜಿಲ್ಲೆ 3170ದ ಮಾಜಿ ಗವರ್ನರ್ ಡಾ. ಪ್ರಾಣೇಶ್ ಜಾಗೀರ್ ದಾರ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಆಶ್ರಯದಲ್ಲಿ ನಗರದ ಕಾಸ್ಮೋ ಕ್ಲಬ್ ಆವರಣದ ಶುಭಾಂಗಣದಲ್ಲಿ ನಡೆದ ರೋಟರಿ ಮಾಜಿ ಅಧ್ಯಕ್ಷರು ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಾಜಿ ಅಧ್ಯಕ್ಷರು ತಾವು ಗಳಿಸಿದ ಅನುಭವದ ಜೊತೆಗೆ ಪಂಚಸೂತ್ರಗಳ ಮೂಲಕ ಆ ಕ್ಲಬ್‌ ಹಾಗೂ ಹಿರಿಯ-ಕಿರಿಯ ಸದಸ್ಯರಿಗೆ ಮಾರ್ಗದರ್ಶನ ನೀಡಬೇಕೆಂದು ಹೇಳಿದರು.

ಪಂಚಸೂತ್ರಗಳಾದ ದೂರದರ್ಶಿತ್ವ, ಸಮದರ್ಶಿತ್ವ, ಪಾರದರ್ಶಕತನ, ಮಾರ್ಗದರ್ಶಿತನ ಹಾಗೂ ಸಮಷ್ಟಿದರ್ಶಿತ್ವದೊಂದಿಗೆ ಮಾರ್ಗದರ್ಶನ ಮಾಡಬೇಕು. ತಾವು ಅಧ್ಯಕ್ಷರಾದ ರೋಟರಿ ಕ್ಲಬ್‌ಗೆ ತಮ್ಮ ಅವಧಿ ನಂತರ ಉತ್ತಮ ಪೋಷಕರಾಗಿ ಆ ಕ್ಲಬ್ ಅಧ್ಯಕ್ಷರಿಗೆ ಸಮಯಕ್ಕೆ ಸರಿಯಾದ ಮಾರ್ಗದರ್ಶನ ನೀಡಿದ ಕ್ಲಬ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.

ಮಾಜಿ ಅಧ್ಯಕ್ಷರು ತಮಗೆ ಸಿಕ್ಕ ಅನುಭವವನ್ನು ಆ ಕ್ಲಬ್‌ನ ಕಿರಿಯ ಸದಸ್ಯರೊಂದಿಗೆ ಒಡನಾಟದ ಮೂಲಕ ರೋಟರಿಯ ಆಚಾರ- ವಿಚಾರಗಳು, ಪದ್ಧತಿಗಳನ್ನು ತಿಳಿಸಿ, ನೂತನ ಸದಸ್ಯರನ್ನು ಬೌದ್ಧಿಕವಾಗಿ ಸಶಕ್ತಗೊಳಿಸುವ ಜವಾಬ್ದಾರಿ ಮಾಜಿ ಅಧ್ಯಕ್ಷರ ಮೇಲಿದೆ ಎಂದು ತಿಳಿಸಿದರು.

ರೋಟರಿ ಜಿಲ್ಲಾ 3182 ಜಿಲ್ಲಾ ಗವರ್ನರ್ ಡಾ. ಬಿ.ಸಿ. ಗೀತಾ, ಮಾಜಿ ಅಧ್ಯಕ್ಷರ ಸಮಾವೇಶದ ಅಧ್ಯಕ್ಷ ಎಸ್.ದತ್ತಾತ್ರಿ, ರೋಟರಿ ಕ್ಲಬ್ ಶಿವಮೊಗ್ಗ ಅಧ್ಯಕ್ಷ ಸೆಂತೀಲ್ ವೇಲನ್, ಅಸಿಸ್ಟೆಂಟ್ ಗವರ್ನರ್ ರಾಜೇಂದ್ರ ಪ್ರಸಾದ್, ಮಾಜಿ ರೋಟರಿ ರಾಜ್ಯಪಾಲರಾದ ಡಾ. ಪಿ.ನಾರಾಯಣ್, ಎಂ.ಜಿ. ರಾಮಚಂದ್ರಮೂರ್ತಿ, ಎಚ್.ಎಲ್. ರವಿ, 4 ರೆವಿನ್ಯೂ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಮತ್ತು ಹಾಸನ ಜಿಲ್ಲೆಗಳಿಂದ 400ಕ್ಕೂ ಹೆಚ್ಚು ರೋಟರಿ ಮಾಜಿ ಅಧ್ಯಕ್ಷರು ಸಮಾವೇಶದಲ್ಲಿ ಭಾಗವಹಿಸಿದ್ದರು.

- - - -ಫೋಟೋ:

ಸಮಾವೇಶವನ್ನು ರೋಟರಿ ಮಾಜಿ ಗವರ್ನರ್ ಡಾ. ಪ್ರಾಣೇಶ್ ಜಾಗೀರ್ ದಾರ್ ಉದ್ಘಾಟಿಸಿದರು.