ಎಐ ಹಾಗೂ ಮಷಿನ್ ತಂತ್ರಜ್ಞಾನ ಬಹಳ ಪ್ರಭಾವಿಸುತ್ತಿರುವ ಇಂತಹ ಸಂದರ್ಭದಲ್ಲಿ ಗ್ರಾಮೀಣ ಮಕ್ಕಳೂ ಕೂಡ ಮಾಹಿತಿ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕಿದೆ.
ಧಾರವಾಡ:
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಐಟಿ-ಬಿಟಿ, ಸಿಎಸ್ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳು ಯುವ ಜನಾಂಗವನ್ನು ತೀವ್ರವಾಗಿ ಆಕರ್ಷಿಸುತ್ತಿವೆ. ಅಲ್ಲದೇ ಎಐ ಹಾಗೂ ಮಷಿನ್ ತಂತ್ರಜ್ಞಾನ ಬಹಳ ಪ್ರಭಾವಿಸುತ್ತಿರುವ ಇಂತಹ ಸಂದರ್ಭದಲ್ಲಿ ಗ್ರಾಮೀಣ ಮಕ್ಕಳೂ ಕೂಡ ಮಾಹಿತಿ ತಂತ್ರಜ್ಞಾನಕ್ಕೆ ತೆರೆದುಕೊಳ್ಳಬೇಕಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಾರ್ಯಾಲಯದ ಉಪನಿರ್ದೇಶಕ ಗಿರೀಶ ಪದಕಿ ಹೇಳಿದರು.ರಾಯಾಪುರದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಹಾಗೂ ಟಾಟಾ ಕನ್ಸಲ್ಟನ್ಸಿ ಸರ್ವಿಸ್ ಸಹಯೋಗದಲ್ಲಿ ಏರ್ಪಡಿಸಿದ್ದ ವಿಭಾಗ ಮತ್ತು ರಾಜ್ಯಮಟ್ಟದ ಗ್ರಾಮೀಣ ಐಟಿ ಕ್ವಿಜ್ ಉದ್ಘಾಟಿಸಿ ಮಾತನಾಡಿದ ಅವರು, ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಮಾಹಿತಿ ತಂತ್ರಜ್ಞಾನದ ಜ್ಞಾನ, ಡಿಜಿಟಲ್ ಸಾಕ್ಷರತೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಐಟಿ ರಸಪ್ರಶ್ನೆ ಸಹಕಾರಿಯಾಗಲಿದೆ ಎಂದರು.
ಡಿಜಿಟಲ್ ಯುಗದಲ್ಲಿ ಮಾಹಿತಿ ತಂತ್ರಜ್ಞಾನವು ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಸಂವಹನ ಮತ್ತು ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳು ತಂತ್ರಜ್ಞಾನ ಕೇವಲ ಬಳಸುವವರಾಗದೆ, ಅದರ ಹಿಂದಿನ ವಿಜ್ಞಾನ ಅರ್ಥ ಮಾಡಿಕೊಳ್ಳಬೇಕು. ಡಿಜಿಟಲ್ ಜ್ಞಾನ, ಸೃಜನಶೀಲತೆ ಮತ್ತು ನವೀನ ಚಿಂತನೆಗಳು ಭವಿಷ್ಯದ ಸಮಾಜ ನಿರ್ಮಾಣಕ್ಕೆ ಅತ್ಯಗತ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ ಬಮ್ಮಕ್ಕನವರ, ಇಂತಹ ರಸಪ್ರಶ್ನೆ ಸ್ಪರ್ಧೆಗಳು ವಿದ್ಯಾರ್ಥಿಗಳ ಪಠ್ಯ-ಪುಸ್ತಕದ ಜ್ಞಾನವನ್ನು ವಿಸ್ತರಿಸುವ ಜತೆಗೆ ಅವರಲ್ಲಿ ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಸೃಜನಶೀಲತೆ, ನಿರ್ಧಾರ ಕೈಗೊಳ್ಳುವ ಕೌಶಲ್ಯ ಮತ್ತು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತವೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಲು ಹಾಗೂ ಅವರ ಜ್ಞಾನವನ್ನು ಸಮಕಾಲೀನ ವಿಷಯಗಳೊಂದಿಗೆ ಸಂಪರ್ಕಿಸಲು ಇವು ಉತ್ತಮ ಅವಕಾಶಗಳಾಗಿವೆ. ಐಟಿ ರಸಪ್ರಶ್ನೆ ಸ್ಪರ್ಧೆಯು ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನ ಕಲಿಕೆಯ ಆಸಕ್ತಿಯನ್ನು ಹೆಚ್ಚಿಸುವುದರೊಂದಿಗೆ ಡಿಜಿಟಲ್ ಸಾಕ್ಷರತೆ, ವೈಜ್ಞಾನಿಕ ಮನೋಭಾವ ಮತ್ತು ಜ್ಞಾನಾಧಾರಿತ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ವಿಜ್ಞಾನ ವಿಷಯ ಪರಿವೀಕ್ಷಕಿ ಡಾ. ಗಿರಿಜಾ ಲಮಾಣಿ ಸ್ವಾಗತಿಸಿದರು. ಸ್ಪರ್ಧೆಯು ಕೇವಲ ಕಂಪ್ಯೂಟರ್ ಜ್ಞಾನಕ್ಕೆ ಸೀಮಿತವಾಗದೆ, ಆಧುನಿಕ ಡಿಜಿಟಲ್ ಸಮಾಜದಲ್ಲಿ ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ವೇದಿಕೆಯಾಗಲಿ ಎಂದರು.ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಿ. ವಿಭು ಭಟ್, ಸತ್ಯಸಾಯಿ ಲೋಕ ಸೇವಾ ಹೈಸ್ಕೂಲ್ ದಕ್ಷಿಣ ಕನ್ನಡ ಹಾಗೂ ದ್ವಿತೀಯ ಸ್ಥಾನವನ್ನು ಯಶವಂತಗೌಡ, ಚಿನ್ಮಯ ಸ್ವತಂತ್ರ ಪದವಿಪೂರ್ವ ಕಾಲೇಜು, ಲಕ್ಷ್ಮಿಸಾಗರ, ಕೋಲಾರ ಪಡೆದರು. ಡಿವೈಪಿಸಿ ಎಂ.ಎಸ್. ಹುಡೇದಮನಿ, ಶಿಕ್ಷಣಾಧಿಕಾರಿಗಳಾದ ನಫೀಸ ದಾವಲಸಾಬನವರ, ಬಸವರಾಜ ಬ್ಯಾಳಿ, ಶೋಭಾ ಮೂರ್ತಿ, ಲಾಯ್ಟ ಸಾಲ್ಡಾನಾ, ಶ್ರೀನಿವಾಸ ಪೂಜಾರಿ, ವಿಜ್ಞಾನ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಪಾಟೀಲ ಕುಲಕರ್ಣಿ, ಎನ್.ಎಸ್. ಹಿರೇಮಠ ಇದ್ದರು.