ಸಾರಾಂಶ
ಯಲಬುರ್ಗಾ: ಅಪರಾಧ ತಡೆಗಟ್ಟಲು ಸಾರ್ವಜನಿಕರು, ವಿದ್ಯಾರ್ಥಿಗಳು ಕೂಡ ಪೊಲೀಸರ ಜೊತೆ ಸಹಕರಿಸಬೇಕು ಎಂದು ಡಿವೈಎಸ್ಪಿ ಶರಣಬಸಪ್ಪ ಸುಬೇದಾರ್ ಹೇಳಿದರು.ಪಟ್ಟಣದ ಎಸ್.ಎ. ನಿಂಗೋಜಿ ಬಿ.ಎಡ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಪರಾಧ ಮಾಡಿದರೆ ಕಾನೂನಿನ ಚೌಕಟ್ಟಿನಲ್ಲಿರುವ ಕಾಯಿದೆಗಳ ಅನುಸಾರ ಅಪರಾಧ ಮಾಡಿದ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.ಪೊಲೀಸ್ ಇಲಾಖೆಯು ಹೊಸದಾಗಿ ನಿಯೋಜಿಸಿದ ತುರ್ತು ಸ್ಪಂದನ ಸಂಖ್ಯೆ ೧೧೨. ಇದು ಯಾವ ರೀತಿ ಕೆಲಸ ಮಾಡುತ್ತದೆ, ನೀವು ಕರೆ ಮಾಡಿದಾಗ ಯಾವ ರೀತಿ ಸ್ಪಂದನೆ ಮಾಡುತ್ತದೆ ಎನ್ನುವುದರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.ಸೈಬರ್ ಕ್ರೈಂ ಜಿಲ್ಲಾ ಪೊಲೀಸ್ ಇನ್‌ಸ್ಪೆಕ್ಟರ್ ಅಮರೇಶ ಹುಬ್ಬಳ್ಳಿ ಮಾತನಾಡಿ, ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು, ಮದ್ಯಸೇವನೆ ಮಾಡಿ ವಾಹನ ಚಾಲನೆ ಮಾಡುವುದು ಕೂಡ ಅಪರಾಧವಾಗಿದೆ. ದೇಶಾದ್ಯಂತ ಹೆಚ್ಚು ಸಂಘರ್ಷ ಹಾಗೂ ಅಪರಾಧ ಪ್ರಕರಣಗಳು ಹೆಚ್ಚಾಗಲು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಕಾರಣ ಆಗುತ್ತಿವೆ. ಯಾವುದೇ ಕಾರಣಕ್ಕೂ ವೈಯಕ್ತಿಕ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಳಸಬೇಡಿ. ಜೊತೆಗೆ ಮಹಿಳೆಯರು ಅನಾಮಧೇಯ ಕರೆ, ಮಿಸ್ಡ್ ಕಾಲ್, ಮೆಸೇಜ್‌ಗೆ ಕಿವಿಗೊಡದಿರುವಂತೆ ಜಾಗೃತಿ ವಹಿಸುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.ಸಿಪಿಐ ಮೌನೇಶ್ ಮಾಲಿಪಾಟೀಲ್ ಮಾತನಾಡಿ, ಅಫೀಮು, ಡ್ರಗ್ಸ್, ಗಾಂಜಾ ಇನ್ನಿತರ ಮಾದಕ ವಸ್ತುಗಳಿಂದ ಜನರಿಗೆ ಆಗುವ ತೊಂದರೆಗಳು ಹಾಗೂ ಮಾದಕ ವಸ್ತುಗಳನ್ನು ಬಳಸಬಾರದು. ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಇದನ್ನು ತಡೆಗಟ್ಟಲು ಕೂಡ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಸ್ಥಳೀಯ ಪೊಲೀಸ್ ಠಾಣೆ ಪಿಎಸ್‌ಐ ಗುಲಾಮ ಅಹ್ಮದ್ ಮಾತನಾಡಿದರು.ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ಪೊಲೀಸರು ಇದ್ದರು.