ಸಾರಾಂಶ
ಎಲ್ಲರೂ ಸಂಘಟಿತರಾಗೋಣ: ಎಚ್.ಎಂ. ಪಾರಸನಳ್ಳಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಇಂದಿನ ಕಾಲದಲ್ಲಿ ಸಂಘಟನೆಗೆ ಹೆಚ್ಚಿನ ಬಲ ಬರುತ್ತಲಿದೆ. ಸಂಘಟನೆಯಿಂದ ಎಂಥ ಕಠಿಣ ಕೆಲಸಗಳನ್ನಾದರೂ ಸುಲಭವಾಗಿ ಮಾಡಬಹುದು. ಆದ್ದರಿಂದ ನಾವೆಲ್ಲರೂ ಇನ್ನಷ್ಟು ಸಂಘಟಿತರಾಗೋಣ ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಂ. ಪಾರಸನಳ್ಳಿ ಹೇಳಿದರು.
ರಬಕವಿಯ ಶ್ರೀಚನ್ನವೀರೇಶ್ವರ ಶಾಲೆಯಲ್ಲಿ ಜರುಗಿದ ಅವಿಭಜಿತ ಜಮಖಂಡಿ ತಾಲೂಕು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಸರ್ಕಾರಿ ನೌಕರರ ಎಲ್ಲ ಸೌಲಭ್ಯಗಳು ಅನುದಾನಿತ ಶಾಲಾ ಶಿಕ್ಷಕರಿಗೂ ದೊರಕಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಹಳೆ ಪಿಂಚಣಿ ಯೋಜನೆ ಜಾರಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದನೆ ಕೊಟ್ಟಿದ್ದಾರೆ. ಯಾವುದೇ ಕಾಲಕ್ಕೂ ಅನುದಾನಿತ ಶಾಲಾ ಶಿಕ್ಷಕರನ್ನು ಅಲಕ್ಷಿಸುವುದು ಸರಿಯಲ್ಲ, ಅಂಥದ್ದನ್ನು ನಾವು ಸಹಿಸುವುದಿಲ್ಲ. ಸದ್ಯದಲ್ಲೇ ಸಂಘದಿಂದ ಸಹಕಾರಿ ಬ್ಯಾಂಕ್‌ನ್ನು ಆರಂಭಿಸಲಾಗುವುದು ಎಂದರು.
ತಾಲೂಕು ಅಧ್ಯಕ್ಷ ವಿ.ಎಸ್. ಯಳಗೂಡ ಪ್ರಾಸ್ತಾವಿಕ ಮಾತನಾಡಿ, ಸಂಘಟನೆಯಿಂದ ಅನವಶ್ಯಕವಾಗಿ ಅನುಭವಿಸುತ್ತಿದ್ದ ಕಿರುಕುಳ ಕಡಿಮೆಯಾಗಿದೆ. ವೇತನ ಪಡೆಯಲು ಪಡುತ್ತಿದ್ದ ಹರಸಾಹಸ ಇಲ್ಲವಾಗಿದೆ. ಇದಕ್ಕೆಲ್ಲ ನೆಚ್ಚಿನ ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ. ಬಸಣ್ಣವರ ಅವರ ಉತ್ತಮ ಸ್ಪಂದನೆ ಕಾರಣವಾಗಿದೆ. ಉತ್ತಮ ಕಾರ್ಯವೈಖರಿಯಿಂದ ಗುಣಾತ್ಮಕ ಶಿಕ್ಷಣ ನೀಡುತ್ತಲೆ ನಾವು ಇನ್ನಷ್ಟು ಗಟ್ಟಿ ಸಂಘಟನೆಗೆ ಒತ್ತು ಕೊಡೋಣ ಎಂದರು.ಬಿ.ಟಿ. ಪತ್ತಾರ, ಐ.ಪಿ. ಲಟ್ಟಿ ಮಾತನಾಡಿ, ಸಂಘಟನೆ, ಬ್ಯಾಂಕ್ ಪ್ರಾರಂಭ, ಸ್ಥಿರನಿಧಿ ಕೂಡಿಕೆ ಸೇರಿದಂತೆ ಕೆಲ ವಿಷಯಗಳ ಕುರಿತು ಮಾತನಾಡಿದರು. ಶಾಲೆಯ ಮುಖ್ಯಶಿಕ್ಷಕ ಪಿ.ಎಸ್. ಕುಂಚನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕ ಪಿ.ಎಸ್. ಕಂಪನಾಯಕ ಕಾರ್ಯಕ್ರಮ ನಿರ್ವಹಿಸಿದರು. ಎ.ಎಸ್. ತಳವಾರ, ವಿ.ಎಸ್. ಅಂಗಡಿ ಸೇರಿದಂತೆ ಪದಾಧಿಕಾರಿಗಳು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು.