ನಾವೆಲ್ಲರೂ ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗೋಣ: ಮಂಜುನಾಥ್

| Published : Nov 23 2025, 01:45 AM IST

ನಾವೆಲ್ಲರೂ ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗೋಣ: ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆ ಮಕ್ಕಳು ಆರ್ಥಿಕವಾಗಿ ಬಡವರಾಗಿದ್ದು, ಅವರ ವಿದ್ಯಾಭ್ಯಾಸಕ್ಕೆ ನಾವೆಲ್ಲರೂ ನೆರವಾಗಬೇಕು. ಆ ಮೂಲಕ ಭವಿಷ್ಯದಲ್ಲಿ ಆ ಮಕ್ಕಳು ಉತ್ತಮ ಸಾಧನೆಯೊಂದಿಗೆ ತಾವು ಓದಿರುವ ಶಾಲೆಗಳ ಬೆಳವಣಿಗೆಗೆ ಕೈಜೋಡಿಸುವಂತಾಗಬೇಕು. ಆಗ ಮಾತ್ರ ಸರ್ಕಾರಿ ಶಾಲೆ ಮಕ್ಕಳಿಗೆ ವಿವಿಧ ಸಂಘ-ಸಂಸ್ಥೆಗಳ ನೆರವು ಸಾರ್ಥಕವಾಗುತ್ತದೆ ಎಂದು ದಲಿತ ನೌಕರರ ಮುಖಂಡ, ಸಾರಿಗೆ ಇಲಾಖೆ ನೌಕರ ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಅವರು ಶನಿವಾರ ನಗರದ ಮಹಾತ್ಮಗಾಂಧಿ ರಸ್ತೆ(ಟಿ.ಕೆ ರಸ್ತೆ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಮೀಪದಲ್ಲಿರುವ ಉರ್ದು, ತಮಿಳು, ಆಂಗ್ಲ ಹಾಗೂ ಕನ್ನಡ ಮಾಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕರ್ನಾಟಕ ದಲಿತ ಸಮನ್ವಯ ಸಮಿತಿಯಿಂದ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಉಚಿತ ನೋಟ್ ಬುಕ್ ಹಾಗೂ ಲೇಖನ ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಆಶಯದಂತೆ ಪ್ರತಿಯೊಬ್ಬರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಅದರಲ್ಲೂ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕಾಗಿದೆ. ಇಂತಹ ಕಾರ್ಯಕ್ರಮಗಳು ಭವಿಷ್ಯದಲ್ಲಿ ಮಕ್ಕಳ ಮನಸ್ಸಿನ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡಲಿವೆ ಎಂದರು.

ದಲಿತ ಸಮನ್ವಯ ಸಮಿತಿಯಿಂದ ಸರ್ಕಾರಿ ಶಾಲೆಗಳ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗುತ್ತಿದೆ. ಈ ಪೈಕಿ ನೋಟ್ ಬುಕ್ ಹಾಗೂ ಲೇಖನ ಸಾಮಾಗ್ರಿಗಳ ವಿತರಣೆ ಸಹ ಒಂದಾಗಿದೆ. ಬಡ ಮಕ್ಕಳ ಶಿಕ್ಷಣಕ್ಕೆ ಸಮಿತಿ ನೆರವಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಕಾರ್ಯಕ್ಕೆ ನೆರವಾಗುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಮಿತಿ ರಾಜ್ಯಾಧ್ಯಕ್ಷ ವಿ. ವಿನೋದ್ ಹೇಳಿದರು.

ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯ ವ್ಯಕ್ತಿ(ಸಿಆರ್‌ಪಿ) ಸಿ. ಚನ್ನಪ್ಪ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಯು. ಮಹಾದೇವಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು.

ಪ್ರಮುಖರಾದ ಶಿಕ್ಷಕ ನರಸಿಂಹಮೂರ್ತಿ, ದಲಿತ ಸಮನ್ವಯ ಸಮಿತಿ ಉಪಾಧ್ಯಕ್ಷ ಸುರೇಶ್, ಸಂಘಟನಾ ಕಾರ್ಯದರ್ಶಿ ನೇತ್ರಾವತಿ, ಮೋಹನ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗೋವಿಂದಪ್ಪ, ಜಗದೀಶ್, ರಾಜು, ಹುಸೇನ್, ಸುಬ್ರಮಣ್ಯ ಹಾಗೂ ೪ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ಹಾಗೂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.