ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪಂಚಾಚಾರ್ಯ ಪೀಠಗಳು ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮ. ನಮ್ಮೆಲ್ಲರಿಗೂ ಬೇಕು. ನಾವೆಲ್ಲರೂ ಧರ್ಮವಂತರಾಗಬೇಕೇ ಹೊರತು ಧರ್ಮಾಂಧರಾಗಬಾರದು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.ತಾಲೂಕಿನ ಕನ್ನೂರು ಗ್ರಾಮದ ಗುರುಪೀಠ ಮಠದಲ್ಲಿ ಲಿಂಗೈಕ್ಯ ಮಲ್ಲಿಕಾರ್ಜುನ ಶಿವಾಚಾರ್ಯರ ೧೯ನೇ ಪುಣ್ಯ ಸ್ಮರಣೋತ್ಸವದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು. ಧರ್ಮ, ವಿಶಾಲವಾದ ವ್ಯಾಖ್ಯಾನ ನೀಡಿದೆ. ಪರೋಪಕಾರ ಜೀವನ ಸಾರ್ಥಕವಾಗಿದೆ. ನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿ ಎಲ್ಲರಿಗೂ ತಲುಪಲಿ. ಶಾಂತಿ ಹಾಗೂ ಸಮೃದ್ಧಿಯಿಂದ ಸರ್ವರು ಬಾಳಲಿ ಎಂದರು.
ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಶ್ರಮದ ಕಾಯಕದಿಂದಲೇ ಮನುಷ್ಯನಿಗೆ ಚೈತನ್ಯ ಪ್ರಾಪ್ತಿಯಾಗುತ್ತದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಸಾಧನೆ. ಅಹಿಂಸಾದಿ ಧ್ಯಾನ ಪರ್ಯಂತ ದಶ ಧರ್ಮ, ಸೂತ್ರಗಳ ಪರಿಪಾಲನೆಯಿಂದ ಮಾನವ ಜೀವನ ಸಾರ್ಥಕಗೊಳ್ಳುವುದೆಂದು ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವ ಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಹುಟ್ಟು ಎಷ್ಟು ಸಹಜವೋ ಹುಟ್ಟಿದ ಮನುಷ್ಯನಿಗೆ ಮೃತ್ಯು ಬಿಟ್ಟಿದ್ದಲ್ಲ. ಹುಟ್ಟು ಸಾವುಗಳ ಮಧ್ಯದ ಬದುಕನ್ನು ಮನುಷ್ಯ ಸಾರ್ಥಕಪಡಿಸಿಕೊಳ್ಳಬೇಕು. ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ವಾಗ್ಮಿಗಳಾಗಿ ಸಮಾಜ ಚಿಂತಕರಾಗಿ ಗುರುಮಠದ ಅಭಿವೃದ್ಧಿಗೆ ಶ್ರಮಿಸಿದ್ದನ್ನು ಮರೆಯಲಾಗದು ಎಂದು ಸ್ಮರಿಸಿದರು.ಕನ್ನಡ ಕುಲ ಕೇಸರಿ ಪ್ರಶಸ್ತಿಗೆ ಬಾಜನರಾದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಾಹಿತ್ಯ ಸಮಾಜವನ್ನು ಸನ್ಮಾರ್ಗಕ್ಕೆ ಕೊಂಡೊಯ್ಯುವ ಪವಿತ್ರ ಕಾರ್ಯ ಮಾಡುತ್ತದೆ. ಸಂಸ್ಕೃತಿ ನಮ್ಮ ಜೀವನದ ಮೌಲ್ಯಯುತ ಪರಂಪರೆಯನ್ನು ಉಳಿಸುತ್ತದೆ. ಮಾತೃಭಾಷೆ ಕನ್ನಡ ನಮ್ಮೆಲ್ಲರ ಉಸಿರಾಗಬೇಕು ಎಂದು ಹೇಳಿದರು.
ಸಾವಯವ ಕೃಷಿ ತಜ್ಞೆ ಕವಿತಾ ಮಿಶ್ರಾ ಮಾತನಾಡಿ, ರೈತ ಮಹಿಳೆಯರು ಪುಣ್ಯವಂತೆ. ದುಡಿದು ನಾಡಿಗೆ ಅನ್ನ ನೀಡುವ ತಾವು ಎಲ್ಲರಗಿಂತ ಶ್ರೇಷ್ಠರು ಎಂದರು. ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ವೀರಶೈವ ಧರ್ಮ ಅಂತರಂಗ ಮತ್ತು ಬಹಿರಂಗ ಶುದ್ಧಿಗೆ ಆದ್ಯತೆ ಕೊಟ್ಟಿದೆ. ಸುಖದ ಸಾಧನವೇ ಧರ್ಮ. ದೇಹದ ಚಿಂತೆ ಬಿಟ್ಟು ದೇವರ ಚಿಂತೆ ಮಾಡಿದಾಗ ಜೀವನ ಸಾರ್ಥಕಗೊಳ್ಳುತ್ತದೆ. ಲಿಂ.ಮಲ್ಲಿಕಾರ್ಜುನ ಶ್ರೀಗಳವರ ವಿಚಾರ ಧಾರೆಗಳು ನಮ್ಮೆಲ್ಲರಿಗೂ ಸ್ಫೂರ್ತಿ ಉಂಟು ಮಾಡುತ್ತಿವೆ ಎಂದರು.ಶಿವತತ್ವ ಚಿಂತಾಮನಿ ಪ್ರಶಸ್ತಿ ಪಡೆದ ಶಂಕರಯ್ಯ ಹಿರೇಮಠ ಶಾಸ್ತ್ರೀಗಳು, ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಶಿವಾಚಾರ್ಯ, ಹತ್ತಳ್ಳಿ ಗುರುಪಾದ ಶಿವಾಚಾರ್ಯರು ಮಾತನಾಡಿದರು. ಬೊಮ್ಮನಹಳ್ಳಿ ಗುರುಶಾಂತ ಶಿವಾಚಾರ್ಯ, ತೊರವಿ ಮಲ್ಲಿಕಾರ್ಜುನ ಸ್ವಾಮೀಜಿ, ರೇವಣಸಿದ್ದ ಶಿವಾಚಾರ್ಯ ಕಡೆನಂದಿಹಳ್ಳಿ, ಡಿ.ಎಲ್.ಚವ್ಹಾಣ ಮುಂತಾದವರು ಇದ್ದರು.
ಮಡಿವಾಳಯ್ಯ ಶಾಸ್ತ್ರೀಗಳು ಸ್ವಾಗತಿಸಿದರು. ಅಮರೇಶ ಜಾಲಿಬೆಂಚಿ ನಿರೂಪಿಸಿದರು. ಗುಡ್ಡಾಪುರ ಶ್ರೀಗಳು ವಂದಿಸಿದರು. ಈ ಸಂದರ್ಭದಲ್ಲಿ ದಾಶಾಳ-ತಾಜಪುರ ಹಿರೇಮಠದ ಪಂ.ಶಂಕರಯ್ಯ ಶಾಸ್ತ್ರಿಗಳಿಗೆ ಶಿವತತ್ವ ಚಿಂತಾಮಣಿ, ವಿಜಯಪುರದ ಸಾವಯವ ಕೃಷಿ ತಜ್ಞರಾದ ಕವಿತಾ ಮಿಶ್ರಾ ಇವರಿಗೆ ಕೃಷಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.--------ಕೋಟ್
ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಶ್ರಮದ ಕಾಯಕದಿಂದಲೇ ಮನುಷ್ಯನಿಗೆ ಚೈತನ್ಯ ಪ್ರಾಪ್ತಿಯಾಗುತ್ತದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಸಾಧನೆ. ಹುಟ್ಟು ಎಷ್ಟು ಸಹಜವೋ ಹುಟ್ಟಿದ ಮನುಷ್ಯನಿಗೆ ಮೃತ್ಯು ಬಿಟ್ಟಿದ್ದಲ್ಲ. ಹುಟ್ಟು ಸಾವುಗಳ ಮಧ್ಯದ ಬದುಕನ್ನು ಮನುಷ್ಯ ಸಾರ್ಥಕಪಡಿಸಿಕೊಳ್ಳಬೇಕು.- ರಂಭಾಪುರಿ ಡಾ.ವೀರಸೋಮೇಶ್ವರ ಶ್ರೀಗಳು, ಬಾಳೆಹೊನ್ನೂರು