ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಲು ಜಿಲ್ಲಾ ಹಾಗೂ ತಾಲೂಕಿನ ಎಲ್ಲಾ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸೌಹಾರ್ದತೆ-ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಶಿ ಕರೆ ನೀಡಿದರು.ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಿದ್ಧತೆ ಕುರಿತು ನಡೆದ ಸಾಹಿತ್ಯ ಪರಿಷತ್ತಿನ ಹೋಬಳಿ, ತಾಲೂಕು ಮತ್ತು ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಸರ್ಕಾರ, ಜಿಲ್ಲಾಡಳಿತ, ಕೇಂದ್ರ ಮತ್ತು ಜಿಲ್ಲಾ ಸಾಹಿತ್ಯ ಪರಿಷತ್ತು ಪರಸ್ಪರ ಸಹಾಯ, ಸಹಕಾರ, ಸಂಯೋಗ, ಸಹಭಾಗಿತ್ವದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಜವಾಬ್ದಾರಿಯಿದೆ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿಗೆ ಹೋಬಳಿ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಅಡಿಪಾಯವಿದ್ದಂತೆ. ನಿಮ್ಮ ಶ್ರಮ ಸಮ್ಮೇಳನ ಯಶಸ್ಸಿಗೆ ಕಾರಣವಾಗುತ್ತದೆ. ನೀವು ಕನ್ನಡ ಸೇವೆಗಾಗಿ ತಾಯಿ ಭುವನೇಶ್ವರಿ, ಕನ್ನಡದ ಮೇಲಿನ ಅಭಿಮಾನದಿಂದ ಬಂದಿದ್ದೀರಿ. ನಿಮಗೆ ಕರ್ತವ್ಯ ಭಾರದ ಹಾರ ಹಾಕಿದ್ದೇವೆ. ಅದು ಗೌರವ ಮನ್ನಣೆಯ ಸಂಕೇತ. ಗೌರವದ ಹಿಂದೆ ಜವಾಬ್ದಾರಿಯೂ ಇದೆ ಎಂಬುದನ್ನು ಅರಿಯಬೇಕು ಎಂದರು.ಮಂಡ್ಯ ಜಿಲ್ಲೆಗೆ ಸಮ್ಮೇಳನ ತರುವಲ್ಲಿ ದಿ.ಸಿ.ಕೆ.ರವಿಕುಮಾರ್ ಅವರ ಉತ್ಸಾಹ ಚಟುವಟಿಕೆ ಕಾರ್ಯತತ್ಪರತೆ ಇದೆ. ಕ್ರಿಯಾಶೀಲ ವ್ಯಕ್ತಿಯಾದ ಅವರ ಸ್ಮರಣೆ ಮಾಡುವುದರ ಜೊತೆಗೆ ಅವರ ಕಾರ್ಯ ಚಟುವಟಿಕೆ ನೆನೆದು ಕೆಲಸ ಮಾಡೋಣ ಎಂದರು.
ಯಾವುದೇ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಂವಿಧಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿಗೂ ಒಂದು ನೀತಿ ನಿಯಮ ಸಂವಿಧಾನ ಇದೆ. ಅದರಂತೆ ಪದಾಧಿಕಾರಿಗಳ ನೇಮಕವಾಗುತ್ತಿದೆ. ಈಗ ತಿದ್ದುಪಡಿಯೊಂದಿಗೆ ಹಲವು ಹುದ್ದೆ ಸೃಷ್ಟಿಸಲಾಗಿದೆ. ಅದರಂತೆ ನೇಮಕವಾದ ನೀವು ಶ್ರದ್ಧೆಯಿಂದ ಕೆಲಸ ನಿರ್ವಹಿಸಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಒಂದು ಸ್ವಾಯತ್ತ ಸಂಸ್ಥೆಯಾದರೂ ಸಹ ಸರ್ಕಾರದ ಬೆಂಬಲ ಬೇಕು. ಸರ್ಕಾರ ಯಾವುದೇ ರಾಜಕೀಯ ಹಿನ್ನೆಲೆಯಲ್ಲಿ ರಚಿತವಾಗಿದ್ದರೂ ಅದು ಕನ್ನಡ ಸರ್ಕಾರದಲ್ಲಿರುವ ಸಚಿವರು, ಶಾಸಕರು ಕನ್ನಡಿಗರು ಅವರ ಬೆಂಬಲ ನಮಗೆ ಇದ್ದೇ ಇರುತ್ತದೆ. ನಾವು ಪ್ರಬುದ್ಧತೆಯಿಂದ ಕೆಲಸ ಮಾಡಬೇಕು ಎಂದರು.
ಸಮ್ಮೇಳನಕ್ಕೆ ಬರುವ ಲಕ್ಷಾಂತರ ಜನರಿಗೆ ರಕ್ಷಣೆ,ಆರೋಗ್ಯ, ಊಟ-ವಸತಿ, ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಬೇಕು. ಸಾಹಿತ್ಯ ಪರಿಷತ್ತು ಒಂದೇ ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸಮ್ಮೇಳನಕ್ಕೆ ನೀಡುತ್ತಿರುವ 30 ಕೋಟಿ ರು. ರಾಜ್ಯದ ಏಳು ಕೋಟಿ ಕನ್ನಡಿಗರ ದುಡ್ಡು. ಅದನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕಾದ ಜವಾಬ್ದಾರಿ ಇದೆ. ನಾವೆಲ್ಲ ಜಾಗರೂಕತೆಯಿಂದ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದರು.ಪ್ರತಿ ಮನೆ ಮೇಲೆ ಕನ್ನಡ ಧ್ವಜ ಹಾರಿಸಿ:
ಸಮ್ಮೇಳನ ನಡೆಯುವ ಮೂರು ದಿನಗಳ ಕಾಲ ಜಿಲ್ಲೆಯ ಪ್ರತಿಯೊಬ್ಬ ಕನ್ನಡಿಗರ ಮನೆಯಲ್ಲಿ ಕನ್ನಡದ ಧ್ವಜ ಹಾರಾಡಿಸಬೇಕು. ಅದರಲ್ಲೂ ಕಸಬಾ ಹೋಬಳಿ ಮತ್ತು ಮಂಡ್ಯ ನಗರದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಬೇಕು. ಸಮ್ಮೇಳನ ಮೇಲಿನ ಬಗ್ಗೆ ಜಗತ್ತಿನ ಎಲ್ಲರೂ ಹೆಮ್ಮೆಯಿಂದ ಮಾತನಾಡುವಂತಾಗಬೇಕು ಎಂದರು.ಮುಂದಿನ 5 ತಿಂಗಳ ಕಾಲ ಆ ನಿಟ್ಟಿನಲ್ಲಿ ನಾವೆಲ್ಲರೂ ಒಂದೇ ಕುಟುಂಬದ ರೀತಿ ಪ್ರೀತಿ-ವಿಶ್ವಾಸ ಉತ್ತಮ ಸಂಬಂಧ ಇಟ್ಟುಕೊಂಡು ಕೆಲಸ ಮಾಡೋಣ. ಎಲ್ಲ ಪದಾಧಿಕಾರಿಗಳು ಇದನ್ನು ಸವಾಲಾಗಿ ಸ್ವೀಕರಿಸಿ ಹೆಚ್ಚು ಜನರು ಸಮ್ಮೇಳನಕ್ಕೆ ಆಗಮಿಸುವಂತೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಾಹಿತ್ಯ ಸಮ್ಮೇಳನ ಸಂಚಾಲಕರಾದ ಮೀರಾ ಶಿವಲಿಂಗಯ್ಯ ಮಾತನಾಡಿ, ಮಂಡ್ಯ ಅಂದರೆ ಇಂಡಿಯಾ ಎಂದು ರಾಜಕೀಯದಲ್ಲಿ ಸಾಂಕೇತಿಕವಾಗಿ ಪ್ರಸಿದ್ಧಿಯಾಗಿದೆ. ಇಡೀ ವಿಶ್ವಕ್ಕೆ 87ನೇ ಸಾಹಿತ್ಯ ಸಮ್ಮೇಳನ ಸಾಕ್ಷಿಯಾಗುತ್ತದೆ ಎಂದರು.ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಹುಸ್ಕೂರು ಕೃಷ್ಣೇಗೌಡ ಮಾತನಾಡಿದರು. ಸಭೆಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ ಕಾರ್ಯದರ್ಶಿಗಳಾದ ಪದ್ಮಿನಿ ನಾಗರಾಜ್, ನೇ.ಭ.ರಾಮಲಿಂಗಶೆಟ್ಟಿ, ಕೋಶಾಧ್ಯಕ್ಷ ಪಟೇಲ್ ಪಾಂಡು, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಹರ್ಷ ವಿ ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಸೇರಿದಂತೆ ಜಿಲ್ಲೆ ತಾಲೂಕು ಮತ್ತು ಹೋಬಳಿ ಘಟಕದ ಪದಾಧಿಕಾರಿಗಳು ಹಾಜರಿದ್ದರು.
ಕಸಾಪ ಅಧ್ಯಕ್ಷರ ಪದಗ್ರಹಣನಾಗಮಂಗಲ:ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ತಾಲೂಕಿನ ಚಾಮಲಾಪುರ ಗ್ರಾಮದ ಸಿ.ಆರ್.ಚಂದ್ರಶೇಖರ್ ಅವರು ಜು.29ರಂದು ಅಧಿಕಾರ ಸ್ವೀಕರಿಸಲಿದ್ದಾರೆ.ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಸಂಜೆ 5.30ಕ್ಕೆ ನಡೆಯಲಿರುವ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಉದ್ಘಾಟಿಸುವರು. ತಹಸೀಲ್ದಾರ್ ನಯೀಂಉನ್ನೀಸಾ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ಅತಿಥಿಗಳಾಗಿ ಪಾಲ್ಗೊಳ್ಳುವರು. ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಖರಡ್ಯ ಬಸವೇಗೌಡ ಅಧಿಕಾರ ಹಸ್ತಾಂತರಿಸುವರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ವಿ.ಹರ್ಷ, ಡಾ.ಕೃಷ್ಣೇಗೌಡ ಹುಸ್ಕೂರು, ಪಟ್ಟಣದ ಕನ್ನಡ ಸಂಘದ ಅಧ್ಯಕ್ಷ ಅಲಮೇಲು, ತಾಲೂಕು ಜಾನಪದ ಪರಿಷತ್‌ನ ಅಧ್ಯಕ್ಷ ಅಣೆಚನ್ನಾಪುರ ಮಂಜೇಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.