ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಕನ್ನಡವು ಪ್ರಾಚೀನ ಭಾಷೆಯಾಗಿದ್ದು, ನಮ್ಮ ನಾಡು-ನುಡಿಯ ಬಗ್ಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಹೇಳಿದರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಪತ್ರಕರ್ತ ಸಿ.ವೈ.ಮೆಣಸಿನಕಾಯಿ ರಚಿಸಿರುವ ಭೋಜರಾಜನ ಪುನಜನ್ಮ ಇನ್ನಿತರ ಸತ್ಯಕಥೆಗಳು ಅನುವಾದಿತ ಕೃತಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಲಕ್ಷ್ಮಣ ಕೆ. ಡೊಂಬರ ರಚಿಸಿರುವ ಈ ಸ್ನೇಹ ಬಂಧನ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಪುಸ್ತಕ ಲೋಕಕ್ಕೆ ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಹೊಸ ಕೃತಿಕಾರರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.
ಚಾರಿತ್ರಿಕ ಕಾದಂಬರಿಕಾರ ಯ.ರು.ಪಾಟೀಲ ಈ ಸ್ನೇಹ ಬಂಧನ ಕೃತಿ ಪರಿಚಯಿಸಿ, ಬೋಧಕೇತರ ಸಾಹಿತಿಗಳಾಗಿ ವೈದ್ಯರು, ಎಂಜಿನಿಯರ್, ಕಂದಾಯ ಇಲಾಖೆ ಅಧಿಕಾರಿಗಳು ಕೃತಿ ರಚಿಸುತ್ತಿದ್ದಾರೆ. ಅವರಿಗೆ ವಿವಿಧ ಕ್ಷೇತ್ರದ ಅನುಭವ ಜಾಸ್ತಿ ಇರುವುದರಿಂದ ಅನುಭವದ ಮೇಲೆ ಕಥೆ, ಕಾದಂಬರಿ, ಕವನ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿದ್ದರು ಸಾಹಿತ್ಯದಲ್ಲಿ ತೊಡಗಿಕೊಂಡಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ. ಹೊಸದಾಗಿ ಸಾಹಿತಿಗಳಾದವರು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿ ಕೃತಿ ರಚನೆಯಲ್ಲಿ ತೊಡಗಿಕೊಳ್ಳಿರಿ ಎಂದು ಕಿವಿ ಮಾತು ಹೇಳಿದರು.ಭೋಜರಾಜನ ಪುನಜನ್ಮ ಇನ್ನಿತರ ಸತ್ಯ ಕಥೆಗಳು ಕೃತಿ ಪರಿಚಯಿಸಿದ ಸಾಹಿತಿ ಡಾ.ಸುನೀಲ ಪರೀಟ, ವಾಸ್ತವಿಕ ನೆಲೆಗಟ್ಟಿನ ಮೇಲೆ ಇಂದು ನಡೆಯುವ ಅಪರಾಧ ಕುರಿತಾದ ನೈಜ ಘಟನೆಗಳನ್ನಾಧರಿಸಿದ ಹಿಂದಿ ಸತ್ಯಕಥೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಸಿ.ವೈ. ಮೆಣಸಿನಕಾಯಿಯವರು ಅಪರಾಧ ಮಾಡುವುದರಿಂದ ಸಮಾಜದ ಮೇಲಿನ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದ್ದಾರೆಂದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿಗಳಾದ ಎಂ.ಎಸ್. ಇಂಚಲ ಮಾತನಾಡಿ, ಸಾಹಿತಿಗಳಾದವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕೃತಿಗಳನ್ನು ನೀಡಬೇಕೆಂದರು. ಸಾಹಿತಿ ಶಿವಯೋಗಿ ಕುಸಗಲ್ ಮಾತನಾಡಿ, ಯುವಕರು ಮೊಬೈಲ್ ತೊರೆದು ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸಿಕೊಳ್ಳಬೇಕೆಂದರು. ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರದ ಉಪಾಧ್ಯಕ್ಷ ನಂ. ವಿಜಯಕುಮಾರ ಮಾತನಾಡಿ, ಇಂದಿನ ಯುವಕರು ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕು. ರಾಜ್ಯ ಸರ್ಕಾರ ಕನ್ನಡ ಬೆಳವಣಿಗೆಗೆ ಯೋಜನೆ ರೂಪಿಸಿಕೊಳ್ಳಬೇಕು. ಶೀಘ್ರವಾಗಿ ವೀರರಾಣಿ ಬೆಳವಡಿ ಮಲ್ಲಮ್ಮನ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸ.ರಾ.ಸುಳಕೂಡೆ, ಸುರೇಶ ದೇಸಾಯಿ ನಿವೃತ್ತ ಶಿಕ್ಷಕ ಚನಮಲ್ಲಪ್ಪ ಪುಟ್ಟಿ, ನಿವೃತ್ತ ಶಿಕ್ಷಕಿ ಇಂದಿರಾ ಹವಾಲ್ದಾರ, ನಿವೃತ್ತ ಶಿಕ್ಷಕಿ ಸಲೋಮಿ ಉಪ್ಪಾರ, ನಿವೃತ್ತ ಶಿಕ್ಷಕಿ ರೂಪಾ ಶಿಗ್ಗಾಂವ, ಮರ್ಶಿ ಕಿಣೇಕರ, ಭಾಗಿರಥಿ ದೇವದಾನ, ನಿವೃತ್ತ ಶಿಕ್ಷಕಿ ಸುಶೀಲಾ ಹಂಚಿನಮನಿ ಇನ್ನಿತರರು ಪಾಲ್ಗೊಂಡಿದ್ದರು. ಬಿ.ಬಿ. ಹಿರೇಮಠ ಸ್ವಾಗತಿಸಿದರು. ಬೆಳಗಾವಿ ಕಸಾಪ ಗೌರವ ಕಾರ್ಯದರ್ಶಿ ಎಂ.ವಾಯ್. ಮೆಣಸಿನಕಾಯಿ ನಿರೂಪಿಸಿದರು. ಶಿಕ್ಷಕಿ ಭಾರತಿ ಕೋರೆ ವಂದಿಸಿದರು.