ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ:
ಹಿಂದಿಗಿಂತ ಇಂದು ಗುಬ್ಬಿ ಸೇರಿದಂತೆ ಪಕ್ಷಿಗಳ ಸಂತತಿ ತೀವ್ರಗತಿಯಲ್ಲಿ ನಶಿಸಿಹೋಗುತ್ತಿದ್ದು, ಅವುಗಳ ಅವನತಿಗೆ ಮಾನವನ ಸ್ವಾರ್ಥದ ಬದುಕು ಕಾರಣವಾಗಿದೆ. ಪಕ್ಷಿಗಳ ಸಂತತಿ ಉಳಿವಿಗೆ ನಾವೆಲ್ಲ ಪಣತೊಡಬೇಕು ಎಂದು ಚೇರಮನ್ ಅಶೋಕ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಪಿಇ ಟ್ರಸ್ಟ್‌ನ ರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಗುಬ್ಬಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಗುಬ್ಬಿಗಳ ಸಂತತಿಯ ಅವನತಿಗೆ ಪ್ರಮುಖ ಕಾರಣ ಇತ್ತಿಚೀನ ವರ್ಷಗಳಲ್ಲಿ ರೈತರು ತಮ್ಮ ಬೆಳೆಗಳ ಸಂರಕ್ಷಣೆಗೆ ಬಳಸುತ್ತಿರುವ ಹಾನಿಕಾರಕ ಕ್ರಿಮಿನಾಶಕಗಳು. ವಾಯುಮಾಲಿನ್ಯ, ಜಲಮಾಲಿನ್ಯ, ನಗರೀಕರಣ, ತೀವ್ರ ಬಿಸಿಲಿನ ತಾಪ, ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮುಂತಾದ ಅಂಶಗಳು ಗುಬ್ಬಿಗಳ ಬದುಕಿನ ಮೇಲೆ ಪರಿಣಾಮ ಬೀರಿ ಸಂತತಿ ನಶಿಸಿಹೋಗುತ್ತಿದೆ. ಅವುಗಳ ಸಂರಕ್ಷಣೆಗೆ ವಿದ್ಯಾರ್ಥಿಗಳು ತಮ್ಮ ಮನೆಗಳ ಮೇಲ್ಛಾವಣಿ ಮೇಲೆ ಮಣ್ಣಿನ ಪಾತ್ರೆಗಳಲ್ಲಿ ಕಾಳು ಹಾಗೂ ಕುಡಿಯಲು ನೀರು ಇಡುವಂತೆ ಸಲಹೆ ನೀಡಿದರು. ಮನೆಯಲ್ಲಿಯೇ ಗುಬ್ಬಿಗಳ ಗೂಡನ್ನು ತಯಾರಿಸಬಹುದೆಂದು ಹೇಳಿ ಮಕ್ಕಳು ಪಕ್ಷಿ ಸಂಕುಲದ ಸಂರಕ್ಷಣೆಗೆ ಮುಂದಾಗಬೇಕೆಂದು ಸೂಚಿಸಿದರು.ಪ್ರಕೃತಿಯ ಜೈವಿಕ ಸೂಚಕಗಳಾದ ಗುಬ್ಬಿಗಳು ಮನುಷ್ಯ ಬದುಕಿನೊಂದಿಗಿನ ಒಡನಾಟ ಕುರಿತು ಶಿಕ್ಷಕ ಎಸ್.ಬಿ.ಗಾಜಿ ಮಾತನಾಡಿ, ಗುಬ್ಬಿ ಸಂತತಿ ಉಳಿವಿಗಾಗಿ ಸನ್ನದ್ಧರಾಗಿರಬೇಕೆಂದು ತಿಳಿಸಿದರು. ಶಿಕ್ಷಕರಾದ ಬಿ.ಐ.ಯಳಮೇಲಿ, ಮುಖ್ಯ ಗುರುಮಾತೆ ವೀಣಾ ಹಳ್ಳೂರ ಹಾಗೂ ವಿದ್ಯಾರ್ಥಿಗಳಾದ ಪ್ರತೀಕ್ಷಾ ಕನ್ನಾಳ, ವಿದ್ಯಾಧರೆ ಬಾಪಟ ಗುಬ್ಬಿ ದಿನಾಚರಣೆ ಬಗ್ಗೆ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯೆ ಜೆ.ಜೆ.ಲೋಬೋ, ವಿಜ್ಞಾನ ಶಿಕ್ಷಕಿ ಭಾಗ್ಯಶ್ರೀ ಶೆಟ್ಟರ, ವೈಶಾಲಿ ಮನ್ನೂರ, ವಿ.ವೈ.ವಗ್ನರ, ಶಾಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.