ನೇತ್ರದಾನದಿಂದ ಅಂಧರ ಬಾಳು ಬೆಳಗೋಣ

| Published : Sep 01 2024, 01:50 AM IST

ಸಾರಾಂಶ

ಸಿರಿಗೆರೆ ಸಮೀಪದ ಕಡ್ಲೇಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ನಮ್ಮ ಕಣ್ಣುಗಳನ್ನು ದಾನ ಮಾಡುವುದು ನಿಸ್ವಾರ್ಥ ಸೇವೆಯಾಗಿದೆ. ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಅಂಧರ ಬಾಳಲ್ಲಿ ಸಹಾಯ ಮಾಡಲು ಸಾವಿನ ನಂತರ ನಮ್ಮ ಅಮೂಲ್ಯವಾದ ಕಣ್ಣುಗಳನ್ನು ದಾನ ಮಾಡುವುದೇ ನೇತ್ರದಾನವಾಗಿದೆ. ನೇತ್ರದಾನ ಮಾಡುವುದರಿಂದ ಸಾವಿನ ನಂತರವೂ ಜಗತ್ತನ್ನು ನೋಡುವ ಸುಂದರ ಅವಕಾಶವಿದೆ ಎಂದು ಹಿರೇಗುಂಟನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ.ಅಭಿಷೇಕ್ ಹಿರೇಮಠ ತಿಳಿಸಿದರು.

ಸಿರಿಗೆರೆ ಸಮೀಪದ ಕಡ್ಲೆ ಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢ ಶಾಲೆಯಲ್ಲಿ ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಮತ್ತು ರೋಟರಿ ಕ್ಲಬ್ ಚಿನ್ಮೂಲಾದ್ರಿ ಚಿತ್ರದುರ್ಗ ಇವರ ವತಿಯಿಂದ ನಡೆದ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ, ನೇತ್ರದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ನೇತ್ರದಾನ ಪಾಕ್ಷಿಕವನ್ನು ಆಚರಿಸಲಾಗುತ್ತದೆ. ಮರಣದ ನಂತರ ನೇತ್ರದಾನ ಮಾಡುವುದರ ಮೂಲಕ ಜೀವಂತವಾಗಿರೋಣ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಮಂಜುನಾಥ್ ಭಾಗವತ್, ನೇತ್ರದಾನ ಒಂದು ಮಹಾ ದಾನವಾಗಿದೆ. ಸತ್ತ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸಿ ಅಥವಾ ಅಗ್ನಿ ಸ್ಪರ್ಶ ಮಾಡಿ ವ್ಯರ್ಥ ಮಾಡದೇ ಮೃತ ವ್ಯಕ್ತಿಯ ಕಣ್ಣುಗಳನ್ನು ದಾನ ಮಾಡಿ ಇಬ್ಬರ ಅಂಧರ ಬದುಕಿಗೆ ದೃಷ್ಟಿ ನೀಡೋಣ ಎಂದರು.

ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕಿನ ಸಂಚಾಲಕರಾದ ರೋಟರಿಯನ್ ವೀರೇಶ್ ಅವರು ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಸುಮಾರು 1800 ಅಂಧ ವ್ಯಕ್ತಿಗಳಿಗೆ ದೃಷ್ಟಿ ನೀಡಲಾಗಿದೆ. ನಿಮ್ಮ ಸಂಬಂಧಿಕರು ಯಾರಾದರೂ ಮೃತಪಟ್ಟರೆ ನಮ್ಮ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೆ ತಕ್ಷಣವೇ ಕಣ್ಣುಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ತಲುಪಿಸಲಾಗುತ್ತದೆ. ನಾವೆಲ್ಲರೂ ಸೇರಿ ನೇತ್ರದಾನ ಬಗ್ಗೆ ಜಾಗೃತಿ ಮೂಡಿಸೋಣ ಎಂಸದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಡಾ. ಮಹೇಶ್ ಮಾತನಾಡಿ, ದೇಶದಲ್ಲಿ ಇನ್ನೂ ನೇತ್ರದಾನದ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲ. ನೇತ್ರದಾನ ಸಾರ್ವಕಾಲಿಕ ಶ್ರೇಷ್ಠದಾನ. ಯಾವುದೇ ಆರೋಗ್ಯವಂತ ವ್ಯಕ್ತಿ ನೇತ್ರದಾನ ಮಾಡಬಹುದು. ನಾವೆಲ್ಲರೂ ಜೀವಂತವಾಗಿರುವಾಗ ನೇತ್ರದಾನ ಮಾಡಲು ತನ್ನನ್ನು ನೋಂದಾಯಿಸಿಕೊಳ್ಳಬಹುದು ನೇತ್ರದಾನಿಯಾಗಲು ಬಸವೇಶ್ವರ ಪುನರ್ ಜ್ಯೋತಿ ಐ ಬ್ಯಾಂಕ್ ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಈ ವೇಳೆ ಸಂಸ್ಥೆಯ ನಿರ್ದೇಶಕ ವೀರಭದ್ರ ಸ್ವಾಮಿ, ಗುರುಮೂರ್ತಿ, ಆರೋಗ್ಯ ನಿರೀಕ್ಷಕ ಏಕಾಂತ್, ಶಿಕ್ಷಕ ನಟರಾಜ್ ಉಪಸ್ಥಿತರಿದ್ದರು.