ಸಂವಿಧಾನ ಪವಿತ್ರ ಗ್ರಂಥವಾದರೆ ಅದರ ಪೀಠಿಕೆಯು ಪ್ರತಿನಿತ್ಯ ಓದುವ ಪಾರ್ಥನೆ ಇದ್ದಂತೆ.

ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ

ಕನ್ನಡಪ್ರಭ ವಾರ್ತೆ ಕಾರವಾರಸಂವಿಧಾನ ಪವಿತ್ರ ಗ್ರಂಥವಾದರೆ ಅದರ ಪೀಠಿಕೆಯು ಪ್ರತಿನಿತ್ಯ ಓದುವ ಪಾರ್ಥನೆ ಇದ್ದಂತೆ. ಪ್ರತಿಯೊಬ್ಬರು ಸಂವಿಧಾನದ ಮಹತ್ವವನ್ನು ಅರಿತುಕೊಂಡು ಪಾಲಿಸುವ ಮೂಲಕ ಉತ್ತಮ ದೇಶವನ್ನು ನಿರ್ಮಿಸೋಣ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಶ್ ಶಶಿ ಹೇಳಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಯಿಂದ ಬುಧವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದಲ್ಲಿ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ, ಅವುಗಳಲ್ಲಿನ ಉತ್ತಮ ಸಂಗತಿಗಳನ್ನು ಹೆಕ್ಕಿ ತೆಗೆದು ಭಾರತದ ಸಂವಿಧಾನವನ್ನು ರಚಿಸಲಾಗಿದೆ. ದೇಶದ ನಿಯಮಗಳು, ಕಾಯ್ದೆ ಎಲ್ಲವೂ ಸಂವಿಧಾನದ ಅಡಿಯಲ್ಲಿಯೇ ಇದೆ. ಹೀಗಾಗಿ ಸಂವಿಧಾನವು ಪವಿತ್ರ ಗ್ರಂಥವಾದರೇ ಅದರ ಪೀಠಿಕೆಯು ಮುಖ್ಯ ಪ್ರಾರ್ಥನೆ ಇದ್ದಂತೆ. ಅದನ್ನು ಪ್ರತಿಯೊಬ್ಬರು ಪ್ರತಿನಿತ್ಯ ಓದಿ ಜೀವನದಲ್ಲಿ ಅಳವಡಿಸಿಕೊಂಡು ಪಾಲನೇ ಮಾಡಿದಾಗ ಮಾತ್ರ ಉತ್ತಮ ದೇಶ ನಿರ್ಮಿಸಲು ಸಾಧ್ಯ. ಸಂವಿಧಾನ ಪಾಲನೆಯ ಮೇಲೆಯೇ ನಮ್ಮ ದೇಶ ನಿಂತಿದೆ. ಭಾರತ ಸಂವಿಧಾನವು ಜಗತ್ತಿನಲ್ಲಿಯೇ ಉತ್ತಮ ಸಂವಿಧಾನವಾಗಿದ್ದು, ಪಾಲಕರು ಮಕ್ಕಳಿಗೆ ಈ ಬಗ್ಗೆ ಹೇಳಿ ಕೊಡುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ, ಜಾತಿ, ಧರ್ಮ ಇರುವ ನಮ್ಮ ದೇಶದಲ್ಲಿ ಎಲ್ಲರನ್ನು ಶಾಂತಿಯುತವಾಗಿ ಕಾಪಾಡಲು ಸಂವಿಧಾನವೇ ಕಾರಣ. ಅಂತಹ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೇಂದ್ರ ಸ್ಥಾನದಲ್ಲಿಟ್ಟು ಪೂಜಿಸಬೇಕು. ಸಂವಿಧಾನದ ಪೀಠಿಕೆ ಕೇವಲ ಕಾಗದಕ್ಕೆ ಸಿಮಿತವಾಗದೇ ಪ್ರತಿನಿತ್ಯದ ಪ್ರಾರ್ಥನೆಯಾಗಿ ಪರಿವರ್ತನೆಯಾಗಬೇಕು. ಸಂವಿಧಾನಕ್ಕೆ ಪೂರಕವಾಗಿ ನಮ್ಮ ವಿಚಾರಧಾರೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿ ಅಲ್ಲಾಭಕ್ಷ, ಸಂವಿಧಾನದ ಪೀಠಿಕೆ ಓದಿದರೆ ಸಾಕು ಅದರಲ್ಲೇ ಸಂಪೂರ್ಣ ಸಂವಿಧಾನ ಸಾರಾಂಶ ಅಡಕವಾಗಿದೆ ಎಂದರು.ನಾಗರಾಜ ಹೆಗಡೆ ಅಪಗಾಲ ಸಂವಿಧಾನದ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ಸಂವಿಧಾನ ಕೇವಲ ಪರೀಕ್ಷೆಗೆ, ಅಂಕಗಳಿಗೆ ಸೀಮಿತವಾಗಬಾದರು. ವಿದ್ಯಾರ್ಥಿಗಳು ಸಂವಿಧಾನವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ನಾಗರೀಕರ ಮೊದಲ ಕರ್ತವ್ಯವೇ ಸಂವಿಧಾನವನ್ನು ಪಾಲಿಸುವುದು ಎಂದರು.ಸಂವಿಧಾನ ಪೀಠಿಕೆಯನ್ನು ಸ್ವೀಕರಿಸಲಾಯಿತು. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ನೀಡಲಾಯಿತು. ಬಳಿಕ ಸಂಗೀತ ಕಾರ್ಯಕ್ರಮ ನಡೆಯಿತು.