ಗಾಂಧೀಜಿ ತತ್ವಾದರ್ಶ ಪಾಲಿಸಿ ಪಾನಮುಕ್ತ ಸಮಾಜ ನಿರ್ಮಿಸೋಣ: ಶಾಸಕ ತನ್ವೀರ್ ಸೇಠ್

| Published : Oct 09 2024, 01:35 AM IST

ಗಾಂಧೀಜಿ ತತ್ವಾದರ್ಶ ಪಾಲಿಸಿ ಪಾನಮುಕ್ತ ಸಮಾಜ ನಿರ್ಮಿಸೋಣ: ಶಾಸಕ ತನ್ವೀರ್ ಸೇಠ್
Share this Article
  • FB
  • TW
  • Linkdin
  • Email

ಸಾರಾಂಶ

ಮಹಾತ್ಮ ಗಾಂಧೀಜಿ ಅವರು ಸತ್ಯದ ಮಾರ್ಗದಲ್ಲಿ ಹೋರಾಟ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ನಿರ್ಣಾಯಕ ಪಾತ್ರ ವಹಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧೀಜಿ, ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಬದುಕು ಕಟ್ಟಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ತತ್ವ ರೂಢಿಸಿಕೊಂಡು ಹೋರಾಟ ನಡೆಸಿದ ಮಹನೀಯರ ವ್ಯಕ್ತಿತ್ವ ಮತ್ತು ಮೌಲ್ಯಗಳು ಭಾರತ ದೇಶದ ಅಭಿವೃದ್ಧಿ ಮತ್ತು ಯುವ ಜನತೆಯ ಏಳಿಗೆಗೆ ದಿಕ್ಸೂಚಿಯಾಗಿದೆ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ಕಳಸ್ತವಾಡಿಯ ಸಂಕಲ್ಪಸೌಧ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಗಾಂಧಿ ಸ್ಮೃತಿ ಮತ್ತು ಪಾನಮುಕ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ದುಶ್ಚಟ ಮುಕ್ತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮ ಜನಜಾಗೃತಿ ಮೂಲಕ ಸಮಾಜದಲ್ಲಿ ಮುಖ್ಯವಾಗಿ ದುರ್ಬಲ ವರ್ಗದಲ್ಲಿ ದುಶ್ಚಟಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರ ಜೊತೆಗೆ ಮದ್ಯವರ್ಜನ ಶಿಬಿರ ಮಾಡಿ ವ್ಯಸನಿಗಳ ಮನಪರಿವರ್ತನೆ ಮಾಡಿ ಸಂತೃಪ್ತ ಕೌಟುಂಬಿಕ ಜೀವನ ನಡೆಸಲು ಗ್ರಾಮಾಭಿವೃದ್ಧಿ ಯೋಜನೆ ಪ್ರೇರಕ ಶಕ್ತಿಯಾಗಿದೆ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಸತ್ಯದ ಮಾರ್ಗದಲ್ಲಿ ಹೋರಾಟ ಮಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ನಿರ್ಣಾಯಕ ಪಾತ್ರ ವಹಿಸಿದರು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧೀಜಿ, ಸಂವಿಧಾನವನ್ನು ರಚಿಸಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶ ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ ಮಾತನಾಡಿ, ಕುಡಿತದಿಂದ ಕುಟುಂಬದ ನೆಮ್ಮದಿಯ ಜೊತೆಗೆ ಆರ್ಥಿಕವಾಗಿ ಹಿನ್ನಡೆಯಾಗುತ್ತದೆ. ಆರೋಗ್ಯವು ಹದಗೆಡುತ್ತದೆ ಎಂದು ಹೇಳಿದರು.

ಮಹಾತ್ಮಗಾಂಧೀ ಅವರು ಮದ್ಯಪಾನ, ಧೂಮಪಾನ, ತಂಬಾಕು ಪದಾರ್ಥಗಳ ಸೇವನೆ, ಜೂಜು ಮುಂತಾದವುಗಳನ್ನು ವಿರೋಧಿಸಿದ್ದರು. ಈ ದಿಸೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಕೂಡ ಸಂಕಲ್ಪ ತೊಟ್ಟು ಗಾಂಧೀಜಿಯ ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಅಹಿಂಸಾತ್ಮಕ ತತ್ವ ರೂಪಿಸಿಕೊಂಡು ಹೋರಾಟ ನಡೆಸಿದ ಗಾಂಧೀಜಿ ಅವರ ವ್ಯಕ್ತಿತ್ವ ಮತ್ತು ಮೌಲ್ಯಗಳು ಭಾರತ ದೇಶದ ಅಭಿವೃದ್ಧಿ ಮತ್ತು ಯುವಜನತೆಯ ಏಳಿಗೆಗೆ ದಿಕ್ಸೂಚಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ದೇವರಾಜ ಉಪ ವಿಭಾಗದ ಎ.ಸಿ.ಪಿ. ಶಾಂತಮಲ್ಲಪ್ಪ, ಸಾಹಿತಿ ಮಹೇಶ್ ಚೆಟ್ನಳ್ಳಿ, ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ನಿರ್ದೇಶಕ ವಿ. ವಿಜಯಕುಮಾರ್ ನಾಗನಾಳ, ಯೋಜನಾಧಿಕಾರಿ ಮಾಧವ, ಯೋಜನಾಧಿಕಾರಿ ಶಶಿರೇಖಾ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕನ್ನಡ ಪ್ರಮೋದ್, ವರದರಾಜ್, ನಂಜುಂಡಮೂರ್ತಿ, ಕಿರಗಸೂರು ಶಂಕರ್, ಬನ್ನೂರು ನಾರಾಯಣ್, ಲತಾ ಮುದ್ದುಮೋಹನ್, ಸೋಮಶೇಖರ ಮೂರ್ತಿ, ಮಣಿಯಯ್ಯರ್ ಇದ್ದರು.