ಯುವ ಕ್ರೀಡಾಪಟುಗಳ ಪ್ರತಿಭೆ ಗುರುತಿಸಲು, ಕ್ರೀಡಾ ಸಾಧನೆಯ ಮಹತ್ವ ತಿಳಿಸಲು ಸಂಸದ ಖೇಲ್‌ ಮಹೋತ್ಸವ ದೇಶದಾದ್ಯಂತ ಆಯೋಜಿಸಲಾಗಿದೆ.

ಸಂಸದ ಖೇಲ್‌ ಮಹೋತ್ಸವ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿಕನ್ನಡಪ್ರಭ ವಾರ್ತೆ ಯಲ್ಲಾಪುರ

2030ರಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಕ್ರೀಡಾಕೂಟ ಹಾಗೂ ಪ್ರಧಾನಿ ಮೋದಿ 2036ರಲ್ಲಿ ಭಾರತದಲ್ಲಿ ನಡೆಸಲು ಉದ್ದೇಶಿಸಿರುವ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಈಗಿನಿಂದಲೇ ಯುವಕರನ್ನು ಕ್ರೀಡಾ ಸಾಧನೆಗೆ ಸಿದ್ಧಪಡಿಸಬೇಕಿದೆ. ಈ ನಿಟ್ಟಿನಲ್ಲಿ ಯುವ ಕ್ರೀಡಾಪಟುಗಳ ಪ್ರತಿಭೆ ಗುರುತಿಸಲು, ಕ್ರೀಡಾ ಸಾಧನೆಯ ಮಹತ್ವ ತಿಳಿಸಲು ಸಂಸದ ಖೇಲ್‌ ಮಹೋತ್ಸವ ದೇಶದಾದ್ಯಂತ ಆಯೋಜಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದ ಕಾಳಮ್ಮನಗರದ ತಾಲೂಕು ಕ್ರೀಡಾಂಗಣದಲ್ಲಿ ಮೈ ಭಾರತ ಕೇಂದ್ರ, ಖೇಲೋ ಇಂಡಿಯಾ ಆಯೋಜಿಸಿದ್ದ ಸಂಸದ ಖೇಲ್‌ ಮಹೋತ್ಸವ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಸ್ವೀಕರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಸರ್ದಾರ ವಲ್ಲಭಭಾಯಿ ಪಟೇಲ ಹಾಗೂ ವಂದೇ ಮಾತರಂ ಗೀತೆಯ 150ನೇ ವರ್ಷದ ಈ ಸಂದರ್ಭದಲ್ಲಿ ವ್ಯಸನಮುಕ್ತ ಸಮಾಜ ನಿರ್ಮಾಣದ ಗುರಿಯನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಯುವಕರು ಕ್ರೀಡೆಯಲ್ಲಿ ಆಸಕ್ತಿ ಹೊಂದುವ ಮೂಲಕ ಮಾದಕಮುಕ್ತ ವ್ಯಕ್ತಿತ್ವದ ನಿರ್ಮಾಣವಾಗಬೇಕು ಎಂದು ಪಕ್ಷಾತೀತವಾಗಿ ಯುವಜನ ಸೇವಾ ಕ್ರೀಡಾ ಇಲಾಖೆಯ ಮೂಲಕ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಸ್ವಜನ ಪಕ್ಷಪಾತವಾಗದಂತೆ ಫಿಟ್ ಇಂಡಿಯಾ, ಖೇಲೋ ಇಂಡಿಯಾಗೆ ಮಹತ್ವ ನೀಡಿದ್ದಾರೆ ಎಂದರು.

ಇಂದು ರಾಷ್ಟ್ರೀಯ ಮತದಾನರ ದಿನ, ಹೊಸ ಮತದಾರರ ನೋಂದಣಿ ಮಾಡಿಕೊಳ್ಳುವ ಜತೆಗೆ ಮತದಾನದ ಪಾವಿತ್ರದ ರಕ್ಷಣೆ ನಮ್ಮ ಹೊಣೆಯಾಗಬೇಕು. ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಭಾವನೆಯ ಮೂಲಕ ಪ್ರಜಾಪ್ರಭುತ್ವ ರಕ್ಷಣೆ ಮಾಡಬೇಕು. ಅಂಬೇಡ್ಕರ್ ರಚಿತ ಶ್ರೇಷ್ಠ ಸಂವಿದಾನ ವಿಶ್ವದಲ್ಲೇ ಮಾದರಿಯಾಗಿದೆ. ಇದನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮತದಾನ ಜಾಗೃತಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಆಯ್ದ ಕ್ರೀಡಾಪಟುಗಳಿಗೆ ಕ್ರೀಡಾ ಕಿಟ್ ವಿತರಿಸಲಾಯಿತು.

ಪ್ರಮುಖರಾದ ಅನು ಕಾಮತ, ಉಮೇಶ ಭಾಗ್ವತ್, ಪ್ರಮೋದ ಹೆಗಡೆ, ಹರಿಪ್ರಕಾಶ ಕೋಣಮನೆ, ರಾಘವೇಂದ್ರ ಭಟ್ಟ, ಶ್ಯಾಮಿಲಿ ಪಾಟಣಕರ್, ಚಂದ್ರಕಲಾ ಭಟ್ಟ, ಶ್ರುತಿ ಹೆಗಡೆ, ವೀಣಾ ಯಲ್ಲಾಪುರಕರ್, ಗಣಪತಿ ಬೋಳಗುಡ್ಡೆ, ಮೈ ಭಾರತ ಕೇಂದ್ರದ ಡೆಪ್ಯೂಟಿ ಡೈರೆಕ್ಟರ್ ಲೋಕೇಶಕುಮಾರ, ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ನಾರಾಯಣ ನಾಯಕ ಮತ್ತಿತರರು ಇದ್ದರು.

ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಸ್ವಾಗತಿಸಿದರು, ಅಶೋಕ ನಾಯ್ಕ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಧಾನ ಕಾರ್ಯದರ್ಶಿ ನಟರಾಜ ಗೌಡರ್ ವಂದಿಸಿದರು.