ಸಾರಾಂಶ
ಕುಮಟಾ: ಸ್ವಾತಂತ್ರ್ಯ ಬಂದು ೭೫ ವರ್ಷವಾದರೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಉನ್ನತ ಅಗತ್ಯಗಳಿಗೆ ಬೇರೆ ಜಿಲ್ಲೆಗಳನ್ನು ಅವಲಂಬಿಸಬೇಕಾದ ದುಸ್ಥಿತಿಯಿಂದ ನಾವು ಮತ್ತು ಮುಂದಿನ ಪೀಳಿಗೆಯನ್ನು ಹೊರತರಬೇಕಾದರೆ ಎಲ್ಲವನ್ನೂ ಸರ್ಕಾರದಿಂದ ನಿರೀಕ್ಷಿಸಲಾಗದು. ಕನಿಷ್ಠ ೧೦೦ ಹಾಸಿಗೆಗಳ ಆರಂಭಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪೂರಕ ವ್ಯವಸ್ಥೆಗಳನ್ನು ಸಮುದಾಯವೇ ಮುಂದೆನಿಂತು ಪಡೆದುಕೊಳ್ಳುವ ದೃಢಸಂಕಲ್ಪ ಮಾಡಲೇಬೇಕಿದೆ ಎಂದು ಡಾ. ಜಿ.ಜಿ. ಹೆಗಡೆ ತಿಳಿಸಿದರು.ಇಲ್ಲಿನ ಲಯನ್ಸ್ ಸಭಾಭವನದಲ್ಲಿ ಶುಕ್ರವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಕುರಿತು ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಈಗಾಗಲೇ ತಜ್ಞ ವೈದ್ಯರು, ಹಣಕಾಸು ಕ್ರೋಢೀಕರಣ ಇನ್ನಿತರ ಪೂರಕ ವಿಷಯಗಳಿಗೆ ಸಂಬಂಧಿಸಿ ವಿಚಾರಿಸಿದ್ದೇನೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರಕಿದೆ. ಆದರೆ ಸರ್ಕಾರ ಅಗತ್ಯವಿರುವ ಭೂಮಿ, ವಿದ್ಯುತ್, ನೀರು ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವ ಖಚಿತತೆಯಾದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಷ್ಟಸಾಧ್ಯವಲ್ಲ. ಜತೆಗೆ ನರ್ಸಿಂಗ್ ಕಾಲೇಜು ಹಾಗೂ ಆಯುರ್ವೇದ, ಯೋಗ ಸಹಿತ ಮೆಡಿಕಲ್ ಟೂರಿಸಂ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬಹುದು. ಹಿಂದೆ ಕುಮಟಾದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಘೋಷಣೆಯಾಗಿ ನಿಗದಿಯಾಗಿದ್ದ ಜಾಗದ ಬಗ್ಗೆ ನಿರೀಕ್ಷೆ ಇಟ್ಟು ಪ್ರಯತ್ನಗಳು ಮತ್ತೊಮ್ಮೆ ನಡೆಯಬೇಕಿದೆ. ಶಾಸಕರೊಟ್ಟಿಗೆ ಉಸ್ತುವಾರಿ ಸಚಿವರನ್ನು ನಿಯೋಗದೊಂದಿಗೆ ಭೇಟಿಯಾಗೋಣ. ಈ ಬಗ್ಗೆ ಜನಸಮುದಾಯದ ಸಹಕಾರ, ವಿಶ್ವಾಸಯುತ ಪ್ರೋತ್ಸಾಹ ಸಿಕ್ಕರೆ ಮುಂದಡಿಯಿಡುತ್ತೇನೆ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ವಿಷಯದಲ್ಲಿ ಡಾ. ಜಿ.ಜಿ. ಹೆಗಡೆ ಸಾಕಷ್ಟು ಅನುಭವಿಕರಿದ್ದು, ಪ್ರಾಮಾಣಿಕ ಪ್ರಯತ್ನ ಭರವಸೆ ಇದೆ. ನಾವೆಲ್ಲರೂ ಸಂಪೂರ್ಣ ಸಹಯೋಗ ನೀಡಿ ಕ್ಷೇತ್ರಕ್ಕೆ ಉತ್ತಮ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ ಮಾಡೋಣ. ಎಲ್ಲರ ಸಹಕಾರ ಬೇಕು ಎಂದರು. ಹಿರಿಯರಾದ ಜೆ.ಟಿ. ಪೈ ಮಾತನಾಡಿ, ಪಕ್ಕದ ಮಂಗಳೂರು, ಆರೋಗ್ಯ ಸೌಲಭ್ಯಗಳ ಕೊರತೆ ಈ ಜಿಲ್ಲೆಯ ದುರಂತ. ಈಗಲೇ ಎಚ್ಚೆತ್ತುಕೊಂಡು ಪ್ರಯತ್ನಪಟ್ಟು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪಡೆದುಕೊಳ್ಳಬೇಕು ಎಂದರು. ಶಿರಸಿಯ ಅನಂತಮೂರ್ತಿ ಹೆಗಡೆ ಮಾತನಾಡಿ, ಸರ್ಕಾರದಿಂದಲೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಆದರೆ ಕುಮಟಾದಲ್ಲಿ ಖಾಸಗಿ ಸಹಯೋಗದಲ್ಲಿ ಆಸ್ಪತ್ರೆ ತರುವುದಾದರೆ ನಮ್ಮೆಲ್ಲರ ಸಹಕಾರ ಇರಲಿದೆ ಎಂದರು. ಡಾ. ಸಚಿನ ನಾಯಕ, ಡಾ. ಅಶೋಕ ಭಟ್ ಹಳಕಾರ, ಡಾ. ಶ್ರೀಧರ ಭಟ್ಟ ಮೂರೂರು, ರೋಟರಿ ಅಧ್ಯಕ್ಷ ಅತುಲ ಕಾಮತ, ರಾಜೀವ ಗಾಂವಕರ ಹಾಗೂ ಮುರಲೀಧರ ಪ್ರಭು ಮಾತನಾಡಿದರು.ಸೂರಜ ನಾಯ್ಕ, ಸಾಮಾಜಿಕ ಕಾರ್ಯಕರ್ತ ಭಾಸ್ಕರ ಪಟಗಾರ, ಡಾ. ಡಿ.ಡಿ. ನಾಯಕ, ಲಯನ್ಸ್ ಕಾರ್ಯದರ್ಶಿ ರಾಮಚಂದ್ರಭಟ್ ಸತೀಶ ನಾಯ್ಕ, ಜಿಲ್ಲಾ ಜನಪರ ಒಕ್ಕೂಟದ ಅಧ್ಯಕ್ಷ ನಾಗೇಶ ನಾಯ್ಕ ಕಾಗಾಲ, ಉದ್ಯಮಿ ಎಚ್.ಎನ್. ನಾಯ್ಕ, ವಿಧಾತ್ರಿ ಅಕಾಡೆಮಿಯ ಗುರುಪ್ರಸಾದ ಶೆಟ್ಟಿ, ರಾಮನಾಥ ಶಾನಭಾಗ, ಜಿ.ಜಿ. ಶಂಕರ ಇತರರು ತಮ್ಮ ಸಹಕಾರ ಘೋಷಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಪ್ರಮುಖರು ಪಾಲ್ಗೊಂಡಿದ್ದರು.