ಬೀದರ್: ನಾಳೆ ಬಾಬೂಜಿ ಜಯಂತಿ ಸರಳವಾಗಿ ಆಚರಿಸೋಣ: ಗೋವಿಂದರೆಡ್ಡಿ

| Published : Apr 04 2024, 01:09 AM IST / Updated: Apr 04 2024, 09:13 AM IST

ಬೀದರ್: ನಾಳೆ ಬಾಬೂಜಿ ಜಯಂತಿ ಸರಳವಾಗಿ ಆಚರಿಸೋಣ: ಗೋವಿಂದರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗಜೀವನರಾಂ ಪುತ್ಥಳಿ ಸ್ವಚ್ಛಗೊಳಿಸುವಂತೆ ನಗರಸಭೆಗೆ ಸೂಚನೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿದರು.

  ಬೀದರ್: ಲೋಕಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಡಾ. ಬಾಬು ಜಗಜೀವನರಾಂ ಜಯಂತಿಯನ್ನು ಏ.5ರಂದು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸೋಣ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಗಳಾದ ಗೋವಿಂದರೆಡ್ಡಿ ಹೇಳಿದರು.

ಅವರು ಬುಧವಾರ ಡಾ. ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವು ಡಾ. ಬಾಬು ಜಗಜೀವನರಾಂ ಜಯಂತಿಯನ್ನು ಎಲ್ಲರೂ ಸೇರಿ ಆಚರಿಸೋಣ.

ಎಲ್ಲಾ ಸರ್ಕಾರಿ ಕಚೇರಿ ಹಾಗೂ ಶಾಲಾ- ಕಾಲೇಜುಗಳಲ್ಲಿ ಡಾ.ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಅಂದು ಪೂಜೆ ಸಲ್ಲಿಸಬೇಕು. ನಗರಸಭೆ ವತಿಯಿಂದ ಜಗಜೀವನರಾಂ ಪುತ್ಥಳಿ ಸ್ವಚ್ಛತೆ ಮಾಡುವಂತೆ ನಗರಸಭೆ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಅಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಾ. ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ನಗರದಲ್ಲಿರುವ ಜಗಜೀವನರಾಂ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಗುತ್ತದೆ. ಎಲ್ಲರೂ ಸೇರಿ ಜಿಲ್ಲೆಯಲ್ಲಿ ಡಾ. ಬಾಬು ಜಗಜೀವನರಾಂ ಜಯಂತಿಯನ್ನು ಯಶಸ್ವಿಯಾಗಿ ಆಚರಿಸೋಣ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಎಲ್ಲಾ ಜಯಂತಿಗಳ ಮೆರವಣಿಗೆಗಳು ಡಾ.ಅಂಬೇಡ್ಕರ್ ವೃತ್ತದ ಮೂಲಕ ನಡೆಯಬೇಕು. ಕೋರ್ಟ್ ಎದುರುಗಡೆಯಿಂದ ಹೋದರೆ ಡಿ.ಜೆ ಹಾಗೂ ಇತರೆ ಮೆರವಣಿಗೆ ಶಬ್ಧದಿಂದ ಕೋರ್ಟ್ ಕಾರ್ಯಕಲಾಪಗಳಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾ ನ್ಯಾಯಾಧೀಶರು ನಮಗೆ ತಿಳಿಸಿರುತ್ತಾರೆ. ಆದ್ದರಿಂದ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಎಲ್ಲಾ ಜಯಂತಿಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸೋಣ. ಎಲ್ಲರೂ ಕಡ್ಡಾಯವಾಗಿ ಜಗಜೀವನರಾಂ ಜಯಂತಿಯನ್ನು ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಅಂದು ಆಚರಿಸಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ. ಗಿರೀಶ್ ಬದೋಲೆ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಸಿಂಧು, ನಗರಸಭೆ ಆಯುಕ್ತರಾದ ಶಿವರಾಜ ರಾಠೋಡ, ಜಗಜೀವನರಾಂ ಸಮಾಜದ ಮುಖಂಡರಾದ ಫರ್ನಾಂಡೀಸ್ ಹಿಪ್ಪಳಗಾಂವ, ರೋಹಿದಾಸ ಘೋಡೆ, ರಾಜು ಕಡ್ಯಾಳ, ಡಾ. ಸುಧಾಕರ್ ಎಕಂಬಿಕರ್, ಮಾರುತಿ ಬೌದ್ದೆ, ರಮೇಶ ಕಟ್ಟಿ, ಬಸವರಾಜ ನಿರಣಾ, ವಿಜಯಕುಮಾರ ಸೋನಾರೆ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.