ಸಾರಾಂಶ
ಬ್ಯಾಡಗಿ: ಪಟ್ಟಣವು ಶಾಂತಿ, ಸೌಹಾರ್ದತೆಗೆ ಹೆಸರಾಗಿದ್ದು, ಬ್ಯಾಡಗಿಯ ಘನತೆಗೆ ತಕ್ಕಂತೆ ಎಲ್ಲರೂ ಶಾಂತಿಯುತವಾಗಿ ಸೌಹಾರ್ದತೆಯಿಂದ ಗ್ರಾಮದೇವತೆ ಜಾತ್ರೆಯನ್ನು ಸಂಭ್ರಮದಿಂದ ಆಚರಿಸೋಣ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಬರುವ ಮಾ. 1ರಿಂದ 7ರ ವರೆಗೆ ಪಟ್ಟಣದಲ್ಲಿ ನಡೆಯುವ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.ಪ್ರತಿ 5 ವರ್ಷಗಳಿಗೊಮ್ಮೆ ಜಾತ್ರೆ ನಡೆಯಲಿದ್ದು, ಸಹಜವಾಗಿ ಎಲ್ಲರೂ ಸಂಭ್ರಮಿಸಲಿದ್ದಾರೆ. ಅದರಲ್ಲೂ ಎಲ್ಲ ವರ್ಗದ ಹಾಗೂ ಸಮಾಜದ ಜನರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅರಿತು ಜಾತ್ರೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಡಿಜೆ ಅವಕಾಶವಿಲ್ಲ ಇಲಾಖೆ ಸ್ಪಷ್ಟನೆ: ಸಿಪಿಐ ಮಹಾಂತೇಶ ಲಂಬಿ ಮಾತನಾಡಿ, ಜಾತ್ರೆಯ ಮೆರವಣಿಗೆ ದಿವಸ ಡಿಜೆ ಬಳಕೆಗೆ ಅವಕಾಶವಿಲ್ಲ. ಅಷ್ಟಕ್ಕೂ ಸಮಿತಿಯು ಡಿಜೆ ಹಚ್ಚುವುದಿಲ್ಲ ಎಂಬ ನಿರ್ಣಯ ಕೈಗೊಂಡಿರುವುದಕ್ಕೆ ಇಲಾಖೆಯ ಪರವಾಗಿ ಸ್ವಾಗತಿಸುತ್ತೇನೆ. ಅತ್ಯಂತ ಖುಷಿಯಿಂದ ಜಾತ್ರೆಯಲ್ಲಿ ಪಾಲ್ಗೊಳ್ಳಲು ಇಲಾಖೆ ಕೂಡ ಸಹಕರಿಸುತ್ತದೆ. ಜಾತ್ರೆ ಎಂದ ಮೇಲೆ ಪರಸ್ಥಳದಿಂದ ಜನರು ಸೇರುವುದು ಸಹಜ. ಅವರೆಲ್ಲರ ಸುರಕ್ಷತೆಯೂ ನಮ್ಮ ಮೇಲಿರುವ ಜವಾಬ್ದಾರಿಯಾಗಿದ್ದು, ಅನಗತ್ಯ ಕಾರಣಗಳಿಗೆ ಕಾನೂನು ಕೈಗೆ ತೆಗೆದುಕೊಂಡಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ನಿಶ್ಚಿತ ಎಂದರು.ಕಡಿಮೆ ಅಭರಣವಿರಲಿ: ಪಿಎಸ್ಐ ಅರವಿಂದ ಮಾತನಾಡಿ, ಜಾತ್ರೆ ಸಂದರ್ಭದಲ್ಲಿ ಕಳ್ಳಕಾಕರು ಒಳಗೆ ನುಗ್ಗುವುದು ಸಹಜ. ಕಳ್ಳತನ ಮಾಡಲೆಂದೇ ಕೆಲವರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಜಾತ್ರೆಯಲ್ಲಿ ಪಾಲ್ಗೊಳ್ಳುವವರು ಕಡಿಮೆ ಆಭರಣಗಳನ್ನು ಧರಿಸಿಕೊಂಡು ಪಾಲ್ಗೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಮಹಿಳೆಯರು ಅತ್ಯಂತ ಜಾಗರೂಕತೆಯಿಂದ ಕಡಿಮೆ ಆಭರಣ ಧರಿಸಿಕೊಳ್ಳುವುದು ಉತ್ತಮ ಹಾಗೂ ಮೆರವಣಿಗೆ ಸಂದರ್ಭದಲ್ಲಿ ಮನೆಗೆ ಬೀಗ ಹಾಕದೇ ಕನಿಷ್ಠ ಒಬ್ಬರಾದರೂ ಮನೆಯಲ್ಲಿ ಇರುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಸಂಪೂರ್ಣ ಸಹಕಾರ: ಅಂಜುಮನ್- ಎ- ಇಸ್ಲಾಂ ಸಮಿತಿ ಸದಸ್ಯ ಆರ್.ಜಿ. ಕಳ್ಯಾಳ ಮಾತನಾಡಿ, ಜಾತ್ರೆ ಕಾರ್ಯಕ್ರಮಕ್ಕೆ ಮುಸ್ಲಿಂ ಸಮುದಾಯದ ಜನರ ಸಂಪೂರ್ಣ ಸಹಕಾರವಿದ್ದು, ಜಾತ್ರಾ ಸಮಿತಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತೇವೆ. ನಮ್ಮೂರಿನ ಜಾತ್ರೆ ಅತ್ಯಂತ ಸುಗಮವಾಗಿ ಮುಕ್ತಾಯಗೊಂಡ ಸಂತೋಷದ ಕ್ಷಣಗಳಲ್ಲಿ ನಾವೂ ಭಾಗಿಯಾಗಲಿದ್ದೇವೆ ಎಂದರು.ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಪುಟ್ಟಪ್ಪ ಛತ್ರದ, ಗಂಗಣ್ಣ ಎಲಿ, ಬಸವರಾಜ ಛತ್ರದ, ಗಂಗಾಧರ ಶಾಸ್ತ್ರೀ ಹಿರೇಮಠ, ಚಂದ್ರಣ್ಣ ಶೆಟ್ಟರ, ನಾಗರಾಜ ದೇಸೂರ, ಸುಭಾಸ್ ಮಾಳಗಿ, ದುರ್ಗೇಶ ಗೋಣೆಮ್ಮನವರ, ಸೋಮಣ್ಣ ಸಂಕಣ್ಣನವರ, ಗುಡ್ಡಪ್ಪ ಆಡಿನವರ, ಚಿಕ್ಕಪ್ಪ ಛತ್ರದ, ಶಂಭುಮಠದ ಇತರರಿದ್ದರು.