ಸಾರಾಂಶ
ಹಬ್ಬದ ಹೆಸರಿನಲ್ಲಿ ಪರಿಸರ ನಾಶ ಮಾಡುವುದರ ಮೂಲಕ ಭೂತಾಯಿಗೆ ಹಿಂಸೆ ನೀಡುವುದು ಸರಿಯಲ್ಲ.
ಹಳಿಯಾಳ: ದೇಶದೆಲ್ಲೆಡೆ ಹೋಳಿ ಹಬ್ಬವನ್ನು ವಿವಿಧ ಬಗೆಯಲ್ಲಿ ಆಚರಿಸಲಾಗುತ್ತಿದ್ದು, ತಾಲೂಕಿನಲ್ಲಿ ಪರಿಸರಸ್ನೇಹಿ ಹೋಳಿ ಆಚರಿಸುವ ವಿಶಿಷ್ಟ ಮಾದರಿಯ ಸಂಪ್ರದಾಯವನ್ನು ಮುಂದುವರಿಸೋಣ ಎಂದು ಹಳಿಯಾಳ ಅರಣ್ಯ ವಿಭಾಗದ ಡಿಸಿಎಫ್ ಡಾ. ಪ್ರಶಾಂತಕುಮಾರ ಕೆ.ಸಿ. ತಿಳಿಸಿದರು.
ಬುಧವಾರ ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಹೋಳಿಗಣಿ ಕುರಿತಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳ ಹೋಳಿ ಆಚರಣಾ ಸಮಿತಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಅರಣ್ಯ ಇಲಾಖೆಯು ನಿಮ್ಮ ಸಂಪ್ರದಾಯ ಮತ್ತು ಆಚಣೆಯನ್ನು ಗೌರವಿಸುತ್ತಿದೆ ಎಂದ ಅವರು, ಹಬ್ಬದ ಹೆಸರಿನಲ್ಲಿ ಪರಿಸರ ನಾಶ ಮಾಡುವುದರ ಮೂಲಕ ಭೂತಾಯಿಗೆ ಹಿಂಸೆ ನೀಡುವುದು ಸರಿಯಲ್ಲ ಎಂದರು.
ಮುಖಂಡ ಹನುಮಂತ ಚಲವಾದಿ ಮಾತನಾಡಿ, ಅರಣ್ಯ ಇಲಾಖೆಯವರು ಹೇಳುತ್ತಿರುವ ಪರಿಸರ ಸ್ನೇಹಿ ಹೋಳಿ ಆಚರಣೆಯ ಜಾಗೃತೆಯು ಕೇವಲ ಹಬ್ಬಕ್ಕೆ ಮಾತ್ರ ಸೀಮಿತವಾಗಿದೆ. ಹಲವಾರು ವರ್ಷಗಳಿಂದ ಪಾಲಿಸುತ್ತಾ ಬಂದಿರುವ ಆಚರಣೆ, ಸಂಪ್ರದಾಯಗಳನ್ನು ಬದಲಾಯಿಸಲು ಅಸಾಧ್ಯವಾದ ಮಾತಾಗಿದೆ. ಅದಕ್ಕಾಗಿ ಅರಣ್ಯ ಇಲಾಖೆಯವರು ಪರಿಸರಸ್ನೇಹಿ ಹೋಳಿ ಆಚರಣೆಯ ಹೊಸ ಕಲ್ಪನೆಯ ಅದರ ಅವಶ್ಯಕತೆಯ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಭಿಯಾನವನ್ನು ನಿರಂತರ ಹಮ್ಮಿಕೊಳ್ಳಬೇಕು ಎಂದರು. ಪರಿಸರ ಸಂರಕ್ಷಣಾ ಹೋರಾಟಗಾರ ಮಂಜುನಾಥ ಶೇರಖಾನೆ ಹಾಗೂ ಸಮಾಜ ಸೇವಕ ಕೃಷ್ಣಪ್ಪ ಕಟ್ಟಿ ಮಾತನಾಡಿದರು. ಚೂಡಪ್ಪ ಬೊಬಾಟೆ, ವಿಜಯ ಬೊಬಾಟೆ, ಯಲ್ಲಪ್ಪ ಹೊನ್ನೋಜಿಯವರು ಹೋಳಿ ಆಚರಣೆಯ ಬಗ್ಗೆ ತಮ್ಮ ಸಲಹೆಗಳನ್ನು ನೀಡಿದರು.ಸಭೆಯಲ್ಲಿ ಪ್ರಮುಖರಾದ ಕೀರಪ್ಪ ಕಂಚನಾಳಕರ, ಚಂದ್ರು ಕಮ್ಮಾರ ಸೇರಿದಂತೆ ವಿವಿಧ ಹೋಳಿ ಸಮಿತಿಯ ಪ್ರತಿನಿಧಿಗಳು ಇದ್ದರು.
ಹಳಿಯಾಳ ವಲಯ ಅರಣ್ಯಾಧಿಕಾರಿ ನರೇಶ ಜಿ.ವಿ. ಮಾತನಾಡಿದರು. ಹಳಿಯಾಳ ಎಸಿಎಫ್ ವಿನುತಾ ಚವ್ಹಾಣ, ಹಳಿಯಾಳ ಉಪವಲಯ ಅರಣ್ಯಾಧಿಕಾರಿ ಪರಶುರಾಮ ಹುದ್ದಾರ, ಅರಣ್ಯ ರಕ್ಷಕಿ ರೇಣುಕಾ ಮಡಿವಾಳ ಹಾಗೂ ಇತರರು ಇದ್ದರು.