ಸಾರಾಂಶ
ಶಾಂತಿ ಸಭೆಯಲ್ಲಿ ಅರುಣಾಂಗ್ಷು ಗಿರಿ
ಕನ್ನಡಪ್ರಭ ವಾರ್ತೆ ಹೊಸಪೇಟೆಶಾಂತಿ, ಸೌಹಾರ್ದತೆಗೆ ಹೆಸರುವಾಸಿ ಆಗಿರುವ ಹೊಸಪೇಟೆಯಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸಬೇಕು. ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ನಗರದಲ್ಲಿ ನಾವೆಲ್ಲರೂ ಸೇರಿ ಸಂಭ್ರಮದಿಂದ ಗಣೇಶೋತ್ಸವ ಆಚರಿಸೋಣ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸೋಣ ಎಂದು ವಿಜಯನಗರ ಎಸ್ಪಿ ಅರುಣಾಂಗ್ಷು ಗಿರಿ ಹೇಳಿದರು.ನಗರದ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಹೊಸಪೇಟೆ ಉಪವಿಭಾಗ ಮಟ್ಟದ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬದ ಕುರಿತ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಣೇಶ ಹಬ್ಬ ಸಂಭ್ರಮಕ್ಕಾಗಿ ಆಚರಣೆ ಮಾಡಲಾಗುತ್ತದೆ. ನಾವೆಲ್ಲರೂ ಖುಷಿಯಾಗಿ ಹಬ್ಬ ಆಚರಿಸೋಣ. ಎಲ್ಲಾ ಗಣೇಶ ಸಮಿತಿಗಳು ಏಕ ಗವಾಕ್ಷಿಯಲ್ಲಿ ಪರವಾನಗಿ ಪಡೆಯಬೇಕು. ಇದಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗುವುದು. ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು. ಪರಸ್ಪರ ಶಾಂತಿ, ಸೌಹಾರ್ದಯುತವಾಗಿ ಹಬ್ಬ ಆಚರಣೆ ಮಾಡಬೇಕು ಎಂದರು.
ಡಿವೈಎಸ್ಪಿ ಡಾ. ತಳವಾರ ಮಂಜುನಾಥ ಮಾತನಾಡಿ, ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಏಕಕಾಲದಲ್ಲಿ ಬಂದಿರುವುದರಿಂದ ಸಾರ್ವಜನಿಕರು ಯಾವುದೇ ಜಾತಿ, ಧರ್ಮಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಹಬ್ಬ ಆಚರಣೆ ಮಾಡಬೇಕು. ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಹಬ್ಬಗಳು ಉಪ ವಿಭಾಗದ ವ್ಯಾಪ್ತಿಯಲ್ಲಿ ಶಾಂತಿ, ಸೌಹಾರ್ದತೆಯಿಂದ ಆಚರಿಸಬೇಕು ಎಂದರು.ಎಎಸ್ಪಿ ಮಂಜುನಾಥ, ಸಿಪಿಐಗಳಾದ ಗುರುರಾಜ ಕಟ್ಟಿಮನಿ, ಹುಲುಗಪ್ಪ, ಸೋಮ್ಲಾ ನಾಯ್ಕ, ಮಹಮದ್ ಗೌಸ್, ಲಖನ್ ಮಸಗುಪ್ಪಿ, ನಗರಸಭೆ ಪೌರಾಯುಕ್ತ ಶಿವಕುಮಾರ್, ತಾಪಂ ಇಒ ಎಂಡಿ ಆಲಂ ಪಾಷಾ, ಮುಖಂಡರಾದ ಯಂಕಪ್ಪ, ಜಗದೀಶ್ ಕಾಮಾಟಗಿ, ಪಿ. ವೆಂಕಟೇಶ, ಗುಜ್ಜಲ ಗಣೇಶ, ದಾದಾ ಖಲಂದರ್ ಮತ್ತಿತರರಿದ್ದರು.