ಲಕ್ಷ್ಮೇಶ್ವರ: ಶಾಂತಿ, ಸೌಹಾರ್ದದಿಂದ ಮೊಹರಂ ಆಚರಿಸಬೇಕು. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವ ಕಾರ್ಯ ಮಾಡಲಾಗುವುದು ಎಂದು ಪಿಎಸ್ಐ ನಾಗರಾಜ ಗಡದ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಮೊಹರಂ ಹಬ್ಬದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಮರು ಸೇರಿ ಸೌಹಾರ್ದತೆಯಿಂದ ಆಚರಿಸಿಕೊಡು ಬರುತ್ತಿರುವುದು ಹಲವು ಶತಮಾನಗಳಿಂದ ನಡೆದು ಬರುತ್ತಿದೆ. ಈ ವರ್ಷವೂ ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ, ಪೊಲೀಸ್ ಇಲಾಖೆಯ ವತಿಯಿಂದ ಅಗತ್ಯವಿರುವ ಭದ್ರತೆ ಒದಗಿಸುತ್ತೇವೆ.

ಶಾಂತಿಗೆ ಭಂಗ ತರುವವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಹೇಳಿದ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರ್ಕಾರ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ಜೂ. 21ರಿಂದ ಜು. 10ರ ವರೆಗೆ ರಿಯಾಯಿತಿ ಲಭ್ಯವಿದ್ದು, ಸಾರ್ವಜನಿಕ ರಿಯಾಯಿತಿ ಇದ್ದಾಗ ದಂಡ ಕಟ್ಟಿ ಇಲಾಖೆಗೆ ಸಹಕರಿಸಿ, ಪೊಲೀಸ್‌ ಇಲಾಖೆಯ ಇ- ಚಲನ್‌ ಮೂಲಕ ದಂಡ ಪಾವತಿಸಲು ಅವಕಾಶವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶಿಗ್ಲಿ ಕ್ರಾಸ್‌ನಲ್ಲಿ ಹೆಚ್ಚಿನ ಜನದಟ್ಟನೆ ಆಗುವುದರಿಂದ ಸಣ್ಣದಾದ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.


ಸಾರ್ವಜನಿಕ ಪರವಾಗಿ ಪೂರ್ಣಾಜಿ ಕರಾಟೆ, ಗಂಗಾಧರ ಮೆಣಸಿನಕಾಯಿ, ಎಂ.ಐ. ಮುಳಗುಂದ, ಅಮರೀಶ ತೆಂಬದಮನಿ, ಬಸವರಾಜ ಕಲ್ಲೂರ ಮಾತನಾಡಿದರು. ಸುಲೇಮಾನಸಾಬ್ ಕಣಕೆ, ಅಬ್ದುಲಸಾಬ್ ಬೆಟಗೇರಿ, ಎಂ.ಎಚ್. ಶಮಲೆವಾಲೆ, ಭೀಮಣ್ಣ ಯಂಗಾಡಿ, ಮರಿಯಪ್ಪ ಭಜಂತ್ರಿ, ಅಕ್ಬರಸಾಬ್ ಸುಂಡಕೆ, ಮಲ್ಲಿಕಾರ್ಜುನ ವಾರದ, ಡಿ.ಬಿ. ಫಕ್ಕೀರಪ್ಪ, ಮುತ್ತಣ್ಣ ಪೂಜಾರ, ಜಾಫರ, ಲಕ್ಷ್ಮೇಶ್ವರ, ಖಾಜಾಪೀರ ಜಮಖಂಡಿ, ನೂರಅಹ್ಮದ ಶಿದ್ದಿ, ಮಂಜಪ್ಪ ವಡ್ಡರ, ದಾದಾಪೀರ ತಂಬಾಕ, ಇರ್ಫಾನ ಮಿರ್ಜಾ, ಮುತ್ತು ನೀರಲಗಿ ಇತರರು ಇದ್ದರು.

ಜು. 11ರಂದು ರಾಷ್ಟ್ರೀಯ ಲೋಕ್ ಅದಾಲತ್

ಗದಗ: ಜಿಲ್ಲೆಯಲ್ಲಿ ಜು. 11ರಂದು ರಾಷ್ಟ್ರೀಯ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹಾಗೂ ಪಕ್ಷಗಾರರು ತಮ್ಮ ವ್ಯಾಜ್ಯಗಳನ್ನು ಪರಸ್ಪರ ರಾಜಿ ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನಾಗವೇಣಿ ತಿಳಿಸಿದ್ದಾರೆ.ರಾಜಿ ಸಂಧಾನದಲ್ಲಿ ಪಾಲ್ಗೊಳ್ಳುವುದರಿಂದ ಸಾರ್ವಜನಿಕರಿಗೆ ಹಾಗೂ ಕಕ್ಷಿದಾರರಿಗೆ ಆಗುವ ಆರ್ಥಿಕ ಹೊರೆ ಹಾಗೂ ಸಮಯ ವ್ಯಯವಾಗುವುದು ತಪ್ಪುತ್ತದೆ. ಅಲ್ಲದೆ, ಮುರಿದುಬಿದ್ದ ಹಳೆಯ ಬಾಂಧವ್ಯವನ್ನು ಮರಳಿ ಉಳಿಸಿಕೊಳ್ಳಲು ಇದು ಸಹಕಾರಿಯಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಕೋರಿದ್ದಾರೆ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾಹಿತಿ ನೀಡಿ, ಪ್ರಕರಣಗಳಿಗೆ ಸಂಬಂಧಪಟ್ಟ ವಕೀಲರು, ಕಕ್ಷಿದಾರರು ಹಾಗೂ ವಿವಿಧ ಇಲಾಖೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು 2026ರ ಜುಲೈ 11ರಂದು ಜರುಗುವ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ತಮ್ಮ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಪರಿಹರಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.