ಸಾರಾಂಶ
ಶಹಾಪುರ ತಾಲೂಕಿನ ಭೀಮರಾಯನ ಗುಡಿ ಅತಿಥಿ ಗೃಹದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಇದು ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಹಬ್ಬವಾಗಲಿದೆ. ತಾಲೂಕಿನ ಸಾಹಿತಿಗಳು, ಸಾಹಿತ್ಯ ಆಸಕ್ತರು ಹಾಗೂ ವಿವಿಧ ಸಂಘಟನೆಗಳು ಸಕ್ರಿಯವಾಗಿ ಭಾಗವಹಿಸಿ ಸಮ್ಮೇಳನವನ್ನು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.ತಾಲೂಕಿನ ಭೀಮರಾಯನಗುಡಿಯಲ್ಲಿ ಅತಿಥಿ ಗೃಹದ ಆವರಣದಲ್ಲಿ ಫೆ.26ರಂದು ಶಹಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯಲಿರುವ 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ತಾಲೂಕಿನ ಜೀವ ನಾಡಿಯಾದ ಸಾಹಿತ್ಯ, ಕಲೆ, ಸಂಸ್ಕೃತಿ ಛಾಯೆ ಹೊಂದಿರುವ ಲಾಂಛನ ಬಿಡುಗಡೆಗೊಳಿಸಿದ್ದು, ನನಗೆ ಅತ್ಯಂತ ಖುಷಿ ತಂದಿದೆ. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯಲಿ ಎಂದರು.ಹಿರಿಯ ಚಿತ್ರಕಲಾವಿದ ಸಂಗಣ್ಣ ದೋರನಹಳ್ಳಿ ಅವರು ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಲಾಂಛನದಲ್ಲಿ ತುಂಬಾ ಚೆನ್ನಾಗಿ ಅನಾವರಣಗೊಳಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ಸಮ್ಮೇಳನ ನಾಡಿನಲ್ಲಿ ಮಾದರಿಯಾಗಲಿ ಎಂದು ತಿಳಿಸಿದರು.
ಸಗರನಾಡಿಗೆ ಕೃಷಿಯ ಅಭಿವೃದ್ಧಿಗೆ ನಾಂದಿಯಾಡಿದ ಕೃಷ್ಣ ಮೇಲ್ದಂಡೆ ಯೋಜನೆ ಮುಖ್ಯ ಕಚೇರಿ, ನೀರಿನ ಕಾಲುವೆ, ತಾಲೂಕಿನ ಶೈಕ್ಷಣಿಕ ಕ್ಷೇತ್ರಕ್ಕೆ ಗರಿಮೆ ಹೆಚ್ಚಿಸಿದ ನವೋದಯ ಶಾಲೆ, ಕೃಷಿ ಮಹಾವಿದ್ಯಾಲಯ ಮತ್ತು ನಾಡಿನ ಆರಾಧ್ಯ ದೈವ, ಆಧ್ಯಾತ್ಮಿಕ ಚೇತನ, ಭಾವೈಕ್ಯತೆಯ ಸಂತರಾದ ದಿಗ್ಗಿ ಸಂಗಮೇಶ್ವರ, ಭೀಮರಾಯನಗುಡಿಯ ಬಲಭೀಮೇಶ್ವರ ಹಾಗೂ ಪ್ರಸ್ತುತ ಪ್ರಮುಖ ಬೆಳೆಗಳಾದ ಭತ್ತ ಮತ್ತು ಹತ್ತಿ ಮುಂತಾದ ಅನೇಕ ವೈಶಿಷ್ಟ್ಯತೆ ಹೊಂದಿರುವ ಲಾಂಛನವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಡಾ. ರವೀಂದ್ರನಾಥ ಹೊಸಮನಿ ಹೇಳಿದರು.ಭೀಮರಾಯನಗುಡಿ ವಲಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶರಣಬಸವ ಪೊಲೀಸ್ ಬಿರಾದಾರ್ ಮಾತನಾಡಿದರು.
ಹಿರಿಯ ಸಾಹಿತಿ ಸಿದ್ದರಾಮ ಹೊನ್ಕಲ್, ಭೀಬಸವರಾಜ ಹೆರುಂಡಿ, ಮಲ್ಲಾರಡ್ಡಿ ಪಾಟೀಲ್ ಹೋತಪೇಟ್, ಸಣ್ಣ ನಿಂಗಪ್ಪ ನಾಯ್ಕೋಡಿ, ದೇವಿಂದ್ರಪ್ಪ ಎಸ್. ವಿಶ್ವಕರ್ಮ, ಕೋಶಾಧ್ಯಕ್ಷ ಶಂಕರ ಹುಲಕಲ್ (ಕೆ), ಪ್ರಾಚಾರ್ಯ ಪ್ರೊ. ಶಿವಲಿಂಗಣ್ಣ ಸಾಹು, ದೇವಿಂದ್ರಪ್ಪ ಮಡಿವಾಳಕರ್, ಬಿ.ಎಂ. ಪೂಜಾರಿ, ನೀಲಕಂಠ ಬಡಿಗೇರ, ಭೀಮಣ್ಣ ಶಖಾಪುರ, ಸಂತೋಷ ಜುನ್ನಾ, ಭೀಮಣ್ಣ ಹೂಗಾರ, ಸುಭಾಸ ಪೂಜಾರಿ, ಮೌನೇಶ ಹಳಿಸಗರ, ಸಂಗನಬಸಪ್ಪ ಹಾದಿಮನಿ, ರಾಘವೇಂದ್ರ ಹಾರಣಗೇರಾ ಇತರರಿದ್ದರು.