ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಹಿಳೆಯರ ಸಾಧನೆಗಳನ್ನು ಗೌರವಿಸಲು ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸಲು ಎಲ್ಲರೂ ಪಣತೊಡಬೇಕು, ಆಗ ಮಾತ್ರ ಮಹಿಳಾ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ನೇರಳೆ ವೀರಭದ್ರಯ್ಯ ಭವಾನಿ ಅಭಿಪ್ರಾಯಪಟ್ಟರು.ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅಪರಾಧ ನಿಗ್ರಹ ಮತ್ತು ಟ್ರಾಫಿಕ್ ಜಾಗೃತಿಗಾಗಿ ಮಹಿಳಾ ಪೋಲಿಸರ ಬೈಕ್ ರ್‍ಯಾಲಿಗೆ ಚಾಲನೆ ನೀಡಿ, ತಾವು ಸಹ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಪ್ರಯಾಣಿಸಿ ಪ್ರಶಾಂತ ನಗರದ ಪೋಲಿಸ್ ಸಮುದಾಯದ ಬಳಿ ಮುಕ್ತಾಯ ಗೊಳಿಸಿದರು.ನಂತರ ಮಾತನಾಡಿದ ನ್ಯಾಯಾಧೀಶರು, ಪ್ರತಿ ವರ್ಷ ಮಾ. 8ರಂದು ಜಾಗತಿಕವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. 2025ರಲ್ಲಿ ‘ಎಲ್ಲಾ ಮಹಿಳೆಯರಿಗೆ ಮತ್ತು ಹುಡುಗಿಯರಿಗೆ ಹಕ್ಕುಗಳು. ಸಮಾನತೆ. ಸಬಲೀಕರಣ’ ಎಂಬ ಥೀಮ್ ಲಿಂಗ ಸಮಾನತೆಯತ್ತ ಪ್ರಗತಿ ತ್ವರಿತಗೊಳಿಸುವ ತುರ್ತುಸ್ಥಿತಿಯನ್ನು ಒತ್ತಿಹೇಳುತ್ತದೆ. ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಪ್ರಸ್ತುತ ವೇಗದಲ್ಲಿ ಪೂರ್ಣ ಲಿಂಗ ಸಮಾನತೆಯನ್ನು ಸಾಧಿಸಲು 2158ನೇ ಇಸವಿಯವರೆಗೆ ತೆಗೆದುಕೊಳ್ಳಬಹುದು. ಅಂದರೆ ಇಂದಿನಿಂದ ಸರಿಸುಮಾರು ಐದು ತಲೆಮಾರುಗಳು ಬೇಕಾಗುತ್ತದೆ ಎಂದರು.
ಈ ವಿಷಯವು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರುವ ವ್ಯವಸ್ಥಿತ ಅಡೆತಡೆಗಳು ಮತ್ತು ಪಕ್ಷಪಾತಗಳನ್ನು ಪರಿಹರಿಸಲು ತ್ವರಿತ, ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡುತ್ತದೆ. ಇದು ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳು ಪರಿಣಾಮಕಾರಿ ಕಾರ್ಯತಂತ್ರಗಳನ್ನು ಜಾರಿಗೆ ತರಲು ಮತ್ತು ಮಹಿಳೆಯರ ಪ್ರಗತಿಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ವರ್ಧಿಸಲು ಪ್ರೋತ್ಸಾಹಿಸುತ್ತದೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ತಾರತಮ್ಯವನ್ನು ಪ್ರಶ್ನಿಸುವ ಉಪಕ್ರಮಗಳನ್ನು ಬೆಂಬಲಿಸುವ ಮೂಲಕ, ನಾವು ಸಾಮೂಹಿಕವಾಗಿ ಹೆಚ್ಚು ಸಮಾನವಾದ ಪ್ರಪಂಚದತ್ತ ಪ್ರಯಾಣವನ್ನು ವೇಗಗೊಳಿಸಬೇಕಾಗಿದೆ ಎಂದು ಹೇಳಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ, ಪ್ರತಿ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿ, ನ್ಯಾಯಾಧೀಶೆಯಾಗಿ, ಪೊಲೀಸ್ ಆಗಿಯೂ ಕೂಡ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ. ಹಾಗಾಗಿ ವಿಶ್ವದಾದ್ಯಂತ ಮಹಿಳೆಯರಿಗಾಗಿ ಗೌರವಾನ್ವಿತವಾಗಿ ಈ ಒಂದು ದಿನವನ್ನು ‘ಅಂತಾರಾಷ್ಟ್ರೀಯ ಮಹಿಳಾ ದಿನ’ ವನ್ನಾಗಿ ಆಚರಿಸುವ ಮೂಲಕ ಮೀಸಲಿಡಲಾಗಿದೆ ಎಂದರು.
ನ್ಯಾಯಾಧೀಶರಾದ ಬಿ.ಶಿಲ್ಪ, ಶೃತಿ, ಮಾನಸ ಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜಾ ಇಮಾಮ್ ಕಾಸೀಂ,ವೀಣಾ ಶೆಟ್ಟಿ ಆರ್ ಐ, ಕಾಸೀಂ, ಡಿವೈಎಸ್ ಪಿ ಎಸ್.ಶಿವಕುಮಾರ್, ಮಹಿಳಾಠಾಣಾ ಇನ್ಸ್ ಪೆಕ್ಟರ್ ನಿರ್ಮಲ, ಪಿಎಸ್ಐಗಳಾದ ಮಂಜುಳಾ, ಗುಣವತಿ ರತ್ನಾಬಾಯಿ, ಶ್ಯಾಮಲ, ಜಿಲ್ಲೆಯ ಎಲ್ಲಾ ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದರು.