ಹಿರಿಯರು ಹಾಕಿಕೊಟ್ಟ ಭಾವೈಕ್ಯತೆ ಮುಂದುವರಿಸೋಣ

| Published : Jul 17 2024, 12:51 AM IST

ಸಾರಾಂಶ

ಭಾವೈಕ್ಯತೆ ಮುಂದುವರಿಸೋಣ ಎಂದು ಶ್ರೀ ಖಾಸ್ಗತೇಶ್ವರಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ ನುಡಿ

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಎರಡು ಕೈ ಸೇರಿದಾಗ ಚಪ್ಪಾಳೆ ಹಾಕಲು ಸಾಧ್ಯವಾಗುತ್ತದೆ. ಒಂದು ವೇಳೆ ಒಂದೇ ಕೈಯಿಂದ ಚಪ್ಪಾಳೆ ಹಾಕಲು ಪ್ರಯತ್ನಿಸಿದರೆ ಅದು ಹಾಕಲು ಸಾಧ್ಯವಿಲ್ಲ. ಚಪ್ಪಾಳೆ ಎಂಬ ಶಬ್ದ ಹೊರಹೊಮ್ಮುವುದಿಲ್ಲ ಎಂದು ಶ್ರೀ ಖಾಸ್ಗತೇಶ್ವರಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಮೋಹರಂ ಹಬ್ಬದ ನಿಮಿತ್ತ ಪಟ್ಟಣದ ಮಹಲ್ ಗಲ್ಲಿಯಲ್ಲಿ ಪ್ರತಿಷ್ಠಾಪಿಸಲಾದ ಕಾಳಗಿ ಫೀರಾ ಎಂಬ ದೇವರಿಗೆ ಹಾಗೂ ದೇವರು ಹಿಡಿಯುವ ಇಮಾಮಸಾಬ ಕಾಳಗಿ ಎಂಬವರಿಗೆ ಪುಷ್ಪಹಾರ ಹಾಕಿ ಗೌರವಿಸಿ ಮಾತನಾಡಿದ ಶ್ರೀಗಳು, ಈ ಹಿಂದಿನ ತಲೆಮಾರಿನಿಂದಲೂ ಶ್ರೀಮಠದ ಮೇಲೆ ಪ್ರೀತಿ ವಾತ್ಸಲ್ಯ ತೋರುತ್ತಾ ಬಂದ ಮುಸ್ಲಿಮರ ನಡೆ ನುಡಿ ಬಹಳ ಆದರ್ಶಮಯವಾಗಿದೆ ಎಂದರು.

ಹಿರಿಯರು ಹಾಕಿಕೊಟ್ಟ ಮಾರ್ಗದಂತೆ ನಾವು ಕೂಡ ಈಗಿನ ಯುವಕರೊಂದಿಗೆ ಪ್ರೀತಿ, ವಾತ್ಸಲ್ಯ ತೋರುವುದರೊಂದಿಗೆ ಯಾವುದೇ ಬೇದ ಭಾವವಿಲ್ಲದೇ ಮುಂದುವರಿಯುತ್ತೇವೆ. ಭಾವೈಕ್ಯತೆ ಎಂಬುದು ಹಿರಿಯರು ಹಾಕಿಕೊಟ್ಟ ಮಾರ್ಗ. ಭಾವೈಕ್ಯತೆ ಎಂಬ ಬೆಸುಗೆ ಉಳಿಯುವ ಕಾರ್ಯವಾಗಬೇಕು ಎಂಬುದು ನಮ್ಮ ಆಸೆಯಾಗಿದೆ. ಇದನ್ನು ಅರ್ಥೈಸಿಕೊಂಡು ಅನುಸರಿಸುವ ಕಾರ್ಯವಾಗಬೇಕು. ಎರಡು ಕೋಮಿನವರು ಹಿರಿಯರ ಮಾರ್ಗದರ್ಶನ ಪಾಲಿಸುತ್ತಾ ಮುಂದೆ ಸಾಗೋಣ ಎಂದು ಸಲಹೆ ನೀಡಿದರು.

ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲಅಹ್ಮದ ಖಾಜಿ ಮಾತನಾಡಿ, ಶ್ರೀ ಖಾಸ್ಗತರ ಮಠದೊಂದಿಗೆ ಈ ಹಿಂದೆ ನಮ್ಮೆಲ್ಲಾ ಹಿರಿಯರು ಬಹಳ ಗೌರವದೊಂದಿಗೆ ನಡೆದುಕೊಳ್ಳುತ್ತಾ ಬಂದಿದ್ದಾರೆ. ಅದನ್ನೇ ನಾವು ಪಾಲಿಸುತ್ತಾ ಬಂದಿದ್ದೇವೆ. ಶ್ರೀ ಖಾಸ್ಗತೇಶ್ವರ ಜಾತ್ರೋತ್ಸವ, ಮೋಹರಂ ಹಬ್ಬ ಎರಡೂ ಕೂಡಿ ಬಂದರೂ ನಾವೆಲ್ಲರೂ ಭಾವೈಕ್ಯತೆಯೊಂದಿಗೆ ಸಾಗುತ್ತೇವೆ ಎಂದು ಹೇಳಿದರು.

ಇದೇ ವೇಳೆ ಕಾಳಗಿ ಫೀರಾ ಎಂಬ ದೇವರನ್ನು ಹಿಡಿಯುವ ಇಮಾಮಸಾಬ ಕಾಳಗಿ ಅವರಿಗೆ ಶ್ರೀಗಳು ಸನ್ಮಾನಿಸಿದರು. ಶ್ರೀಗಳಿಗೂ ಕೂಡಾ ಮುಸ್ಲಿಂ ಸಮಾಜದ ಎಲ್ಲರೂ ಸನ್ಮಾನಿಸಿ ಗೌರವಿಸಿದರು.

ಹಿರಿಯರಾದ ಗನಿಸಾಬ ಲಾಹೋರಿ, ಹಸನಸಾಬ ಕೊರ್ಕಿ, ಖಾಜಾಹುಸೇನ ಕಟ್ಟಿ, ರಫೀಕ್ ಲಾಹೋರಿ, ನಬಿರಸೂಲ ಲಾಹೋರಿ, ಮೊದಲಾದವರು ಪಾಲ್ಗೊಂಡಿದ್ದರು.