ಸಮುದಾಯದೊಂದಿಗೆ ಡೆಂಘಿ ನಿಯಂತ್ರಿಸೋಣ

| Published : May 30 2024, 12:53 AM IST / Updated: May 30 2024, 10:44 AM IST

ಸಮುದಾಯದೊಂದಿಗೆ ಡೆಂಘಿ ನಿಯಂತ್ರಿಸೋಣ
Share this Article
  • FB
  • TW
  • Linkdin
  • Email

ಸಾರಾಂಶ

ಸೊಳ್ಳೆ ನಿಯಂತ್ರಣದಿಂದ ಡೆಂಘಿ, ಚಿಕುನ್‌ ಗುನ್ಯಾ ಮತ್ತು ಮಲೇರಿಯಾ ರೋಗ ನಿಯಂತ್ರಣ ಮಾಡಲು ಸಾಧ್ಯ.

ಗದಗ: ಈಡಿಸ್ ಇಜಿಪ್ಟೈ ಸೊಳ್ಳೆ ಕಚ್ಚುವುದರಿಂದ ಡೆಂಘಿ, ಚಿಕುನ್‌ ಗುನ್ಯಾ ರೋಗ ಹರಡುತ್ತದೆ. ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುತ್ತಿರುವ ಲಾರ್ವಾ ನಾಶಪಡಿಸುವುದರಿಂದ ರೋಗ ಹರಡದಂತೆ ತಡೆಗಟ್ಟಬಹುದು. ಸಮುದಾಯದೊಂದಿಗೆ ಸೇರಿ ಡೆಂಘಿ ಜ್ವರ ನಿಯಂತ್ರಿಸೋಣ ಎಂದು ಅಡವಿಸೋಮಾಪುರ ನಿರೀಕ್ಷಣಾಧಿಕಾರಿ ಸಿದ್ದಪ್ಪ. ಎನ್. ಲಿಂಗದಾಳ ಹೇಳಿದರು.

ತಾಲೂಕಿನ ಅಡವಿಸೋಮಾಪುರ ಸಣ್ಣ ತಾಂಡಾದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಟಗೇರಿ ಹಾಗೂ ಅಡವಿಸೋಮಾಪುರ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಡೆದ ಡೆಂಘಿ ದಿನಾಚರಣೆ ಜಾಥಾ ಕಾರ್ಯಕ್ರಮ ಮತ್ತು ಪರಿಸರ ಸ್ವಚ್ಛತೆ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸೊಳ್ಳೆ ನಿಯಂತ್ರಣದಿಂದ ಡೆಂಘಿ, ಚಿಕುನ್‌ ಗುನ್ಯಾ ಮತ್ತು ಮಲೇರಿಯಾ ರೋಗ ನಿಯಂತ್ರಣ ಮಾಡಲು ಸಾಧ್ಯ. ಸೋಳ್ಳೆಗಳ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ, ಒಡಮಸ್ ಲೇಪನ ಮತ್ತು ಸಂಜೆ ಪ್ರತಿಯೊಂದು ಮನೆಯಲ್ಲಿ ಬೇವಿನ ಸೊಪ್ಪಿನ ಧೂಮೀಕರಣ ಮಾಡುವುದು, ಚರಂಡಿಯಲ್ಲಿ ಕಸಕಡ್ಡಿ ಹಾಕದೆ ನೀರು ನಿಲ್ಲದಂತೆ ಸ್ವಚ್ಛಗೊಳಿಸುವುದು. ನಿಮ್ಮ ನೀರಿನ ಪರಿಕರಗಳಲ್ಲಿ ಲಾರ್ವಾ ಆಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ನಾಗರಾಜ ಜ್ಯೋಷಿ ಮಾತನಾಡಿ, ಸಾರ್ವಜನಿಕರು ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ. ಬೇರೆ ಬೇರೆ ಊರಿಗಳಿಗೆ ಹೋಗಿ ಬಂದಂತವರು ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಸ್ವಚ್ಛತೆಗೆ ಆದ್ಯತೆ ನೀಡಿ, ನೀರಿನ ಪರಿಕರಗಳಲ್ಲಿ ಉತ್ಪತ್ತಿಯಾಗುವಂತಹ ಸೊಳ್ಳೆ ಮರಿ ಲಾರ್ವಾ ನಾಶಪಡಿಸವುದು ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ನಿರೀಕ್ಷಣಾಧಿಕಾರಿ ಬಿ.ಸಿ. ಹಿರೇಹಾಳ, ಎಸ್.ಬಿ. ಗಡಾದ, ಸಮುದಾಯ ಆರೋಗ್ಯಾಧಿಕಾರಿ ಲೂದಿಯಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸವಿತಾ ಪವಾರ, ಉಮಾದೇವಿ ಖಾನಾಪೂರ, ಮಂಜುಳಾ ಆರಿ, ಲಲಿತಾ ಅಂಗಡಿ ಸೇರಿದಂತೆ ಸಿಬ್ಬಂದಿ ವರ್ಗ ಇದ್ದರು.