ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಭೂಮಿಯ ಮೇಲೆ ವ್ಯಕ್ತಿ, ಅಧಿಕಾರ ಶಾಶ್ವತವಲ್ಲ, ನಾವು ನೀಡಿದ ಸೇವೆ ಶಾಶ್ವತ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಭಕ್ತರೆಲ್ಲರೂ ಸೇರಿ ಆದಷ್ಟು ಶೀಘ್ರವೇ ಹಾಲುರಾಮೇಶ್ವರ ದೇವಾಲಯವನ್ನು ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸುವ ಕೆಲಸ ಮಾಡೋಣ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ತಾಲೂಕಿನ ಹಾಲುರಾಮೇಶ್ವರ ಪುಣ್ಯಕ್ಷೇತ್ರದಲ್ಲಿ ದಶಕಗಳಿಂದಲೂ ಕೂಡ ದೇವಾಲಯದ ಪ್ರಗತಿಕಾರ್ಯ ಸಾಗುತ್ತಿದ್ದು, ಇದಕ್ಕೆ ವೇಗ ಕೊಡುವ ಹಿನ್ನೆಲೆಯಲ್ಲಿ ಭಾನುವಾರ ಮಾಜಿ ಶಾಸಕರು, ಸರ್ವ ಪಕ್ಷಗಳ ಮುಖಂಡರು ಹಾಗೂ ಭಕ್ತರ ಸಮ್ಮುಖದಲ್ಲಿ ನಡೆದ ದೇವಾಲಯದ ಪ್ರಗತಿ ಕಾರ್ಯ ಸಂಬಂಧದ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.
ವಾರದ ಪ್ರತಿ ಸೋಮವಾರ ಮಧ್ಯಾಹ್ನ 2 ಗಂಟೆಯ ನಂತರ ಭಕ್ತರು ಸ್ವಯಂ ಪ್ರೇರಿತರಾಗಿ ದೇವಾಲಯದ ಆವರಣದಲ್ಲಿ ಸೇರಿ ಪ್ರಗತಿಯ ಕಾರ್ಯದ ಬಗ್ಗೆ ಚಿಂತನೆ ನಡೆಸುವ ಮೂಲಕ ಕಾರ್ಯೋನ್ಮುಕರಾಗೋಣ ಎಂದು ಹೇಳಿದರು.ದೈವ ಸಂಕಲ್ಪದಂತೆ ಕಾರ್ಯಗಳು ನಡೆಯುತ್ತಿವೆ. ಮಾಜಿ ಸಚಿವರಾದ ಗೂಳಿಹಟ್ಟಿ ಶೇಖರ್ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.
ದೇವಾಲಯದ ಆವರಣ ಸ್ವಚ್ಛಗೊಳಿಸಿ, ಜಮೀನು ಅಳತೆ ಮಾಡಿಸಿ ತಡೆಗೋಡೆ ನಿರ್ಮಾಣ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.ದೇವಾಲಯದ ಪ್ರಗತಿಗಾಗಿ ಮುಜರಾಯಿ ಇಲಾಖೆಯಿಂದ ಧರ್ಮದರ್ಶಿ ಸಮಿತಿ ಮಾಡಲಾಗುವುದು. ಸಮಿತಿಯನ್ನು ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ರಚನೆ ಮಾಡುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸೋಣ ಎಂದ ಅವರು ಮುಂದಿನ ಸಭೆಗೆ ಜಿಲ್ಲಾಧಿಕಾರಿಗಳು ಮತ್ತು ತಹಸೀಲ್ದಾರ್‌ರನ್ನು ಆಹ್ವಾನಿಸಲಾಗುವುದು ಎಂದರು.
ಉದ್ಯಮಿ ಸದ್ಗುರು ಪ್ರದೀಪ್ ಮಾತನಾಡಿ, ಭಾರತದ ಧಾರ್ಮಿಕ ಶಕ್ತಿ ಪೀಠಗಳಲ್ಲಿ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಶ್ರೀ ಹಾಲುರಾಮೇಶ್ವರ ಕ್ಷೇತ್ರದಲ್ಲಿರುವ ಗಂಗಾದೇವಿ ಪುಷ್ಕರಣಿಯಲ್ಲಿ ಬರುವ ಫಲ ಈ ಭೂಮಿಯ ಮೇಲಿನ ಬೇರೆ ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ಬರಲು ಸಾಧ್ಯವಿಲ್ಲ. ಇಂತಹ ಶ್ರದ್ಧಾ ಕೇಂದ್ರವನ್ನು ರಾಜಕೀಯವನ್ನು ಹೊರತುಪಡಿಸಿ ಭಕ್ತರೆಲ್ಲರು ಸೇರಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡೋಣ. ಶ್ರೀ ಹಾಲು ರಾಮೇಶ್ವರ ಸ್ವಾಮಿ ಹಾಗೂ ಶ್ರೀ ಗಂಗಾಮಾತೆಯ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಯೇ ನಮ್ಮ ಸೇವೆಯಾಗಬೇಕು ಎಂದರು.ಈ ವೇಳೆ ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್, ಮುಖಂಡರಾದ ಮಾವಿನಕಟ್ಟೆ ಗುರುಸ್ವಾಮಿ, ದೊಡ್ಡಘಟ್ಟ ಲಕ್ಷ್ಮಣ್, ಕೆ.ಸಿ.ನಿಂಗಪ್ಪ, ಕೋಡಿಹಳ್ಳಿ ತಮ್ಮಣ್ಣ, ಹೆಬ್ಬಳ್ಳಿ ಮಲ್ಲಿಕಾರ್ಜುನ್, ಕೆ.ಎಸ್.ಕಲ್ಮಟ್, ಡಿ.ಎಸ್.ಪ್ರದೀಪ್, ಕೆ.ಅನಂತ್, ಮಂಜುನಾಥ್, ಎಚ್.ಬಿ, ಹಾಲಸಿದ್ದಪ್ಪ, ಜಾನಕಾಲ್ ತಿಮ್ಮಜ್ಜ, ಬಸವರಾಜ್, ಶೆಟ್ಟಿಹಳ್ಳಿ ರಾಮಜ್ಜ, ಕಾರೇಹಳ್ಳಿ ಬಸವರಾಜ್, ಎಂ.ಪಿ.ಶಂಕರ್, ಗೂಳಿಹಟ್ಟಿ ಕೃಷ್ಣಮೂರ್ತಿ, ದೇವಪುರದ ಮುಖಂಡರಾದ ದಿವಾಕರ್, ರುದ್ರಪ್ಪ, ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಗುಳಿಹಟ್ಟಿ ಶೇಖರ್ ಆಪ್ತ ಸಹಾಯಕರಾದ ಮಹೇಶ್, ವರದರಾಜ್, ಬೆನಕನಹಳ್ಳಿ ತಿಪ್ಪೇಶ್,ಜನಕಲ್ ತಿಪ್ಪೇಶ್ ಮಂಜುನಾಥ್, ತುಂಬಿನಕೆರೆ ಬಸವರಾಜ್ ಮತ್ತು ಬನಸ್ಸಿಹಳ್ಳಿ ಕಿರಣ್ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.