ಸಾರಾಂಶ
ಹೊಸಪೇಟೆ: ನಾವೆಲ್ಲರೂ ಒಗ್ಗೂಡಿ ಸ್ವಾತಂತ್ರ್ಯ ಹೋರಾಟಗಾರರಂತೆ ಸಂವಿಧಾನ ರಕ್ಷಣೆ ಮಾಡೋಣ. ಎಲ್ಲರೂ ಸಂವಿಧಾನ ರಕ್ಷಣೆಗೆ ಸೈನಿಕರಾಗೋಣ ಎಂದು ಸಾಮಾಜಿಕ ಹೋರಾಟಗಾರ ಕನ್ಹಯ್ಯಕುಮಾರ್ ತಿಳಿಸಿದರು.
ನಗರದ ಪುನೀತ್ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಸಂತೋಷ್ ಲಾಡ್ ಜನ್ಮದಿನದ ನಿಮಿತ್ತ ಮಂಗಳವಾರ ನಡೆದ ವಿಶ್ವಗುರು ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಗಾಥೆ ಧ್ವನಿಸುರುಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಾರತದ ಸಂವಿಧಾನ ಏಕತೆ ಸಾರಿದೆ. ನಮ್ಮ ಜಾತಿ, ಧರ್ಮ ಬೇರೆ ಇರಬಹುದು. 140 ಕೋಟಿ ಭಾರತೀಯರನ್ನು ಒಗ್ಗೂಡಿಸುವುದು ಸಂವಿಧಾನ. ಎಲ್ಲರಿಗೂ ಸಮಾನ ಮತದಾನದ ಅವಕಾಶವನ್ನು ಸಂವಿಧಾನ ನೀಡಿದೆ. ಸತ್ಯ ಹೇಳಲು ತಾಕತ್ತು ಬೇಕು. ಈಗ ದೇಶದಲ್ಲಿ ವಿಚಾರಧಾರೆಯ ಸಂಘರ್ಷ ನಡೆಯುತ್ತಿದೆ. ಇದನ್ನು ಅರಿಯಬೇಕು ಎಂದರು.
ಭಾರತೀಯ ಸಂಸ್ಕೃತಿಯಲ್ಲಿ ಸಮಾನತೆ ಹಾಗೂ ಜನರ ಶ್ರೇಯೋಭಿವೃದ್ಧಿಗೆ ಅಂಬೇಡ್ಕರ್ ಹಾಗೂ ಬಸವಣ್ಣ ಅವರು ಶ್ರಮಿಸಿದ್ದಾರೆ. 200 ವರ್ಷಗಳವರೆಗೆ ಬ್ರಿಟಿಷರ ಗುಲಾಮರಾಗಿದ್ದವರು, ನಮ್ಮ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡಲು ಬಂದಿದ್ದಾರೆ. ಬುದ್ಧ, ಬಸವ, ಆಂಬೇಡ್ಕರ್, ಗಾಂಧೀಜಿ, ಭಗತ್ ಸಿಂಗ್ ಅವರ ಆದರ್ಶ ಪಾಲನೆ ಮಾಡೋಣ ಎಂದರು.ಗುಜರಾತ್ ಶಾಸಕ ಹಾಗೂ ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ಮಾತನಾಡಿ, ಮೂರು ಸಾವಿರ ವರ್ಷಗಳಿಂದ ಮನುಸ್ಮೃತಿ ಅಧಿಪತ್ಯವನ್ನು ಗೌತಮ ಬುದ್ಧ, ಬಸವಣ್ಣ, ಅಂಬೇಡ್ಕರ್ ಅವರು ಅಂತ್ಯ ಹಾಡಿದ್ದಾರೆ. ಈಗ ಮತ್ತೆ ಮನುಸ್ಮೃತಿ ಹೇರಲು ಹೊರಟಿದ್ದಾರೆ. ಸಂವಿಧಾನ ಬದಲಿಸುತ್ತೇವೆ ಎಂದು ಕೇಂದ್ರದ ಸಚಿವರಾಗಿದ್ದ ಅನಂತಕುಮಾರ ಹೆಗಡೆ ಹೇಳಿದ್ದರು. ಇದರರ್ಥ ಮತ್ತೆ ಮನುಸ್ಮೃತಿ ಆಡಳಿತ ಹೇರಲು ಹೊರಟಿದ್ದಾರೆ. ಹಾಗಾಗಿ ನಾವು ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದರು.
ಸಮಸಮಾಜ ನಿರ್ಮಾಣ ಮಾಡಬೇಕು. ಹಿಂದೂ, ಮುಸ್ಲಿಮರ ನಡುವೆ ಜಗಳ ತಂದಿಡುತ್ತಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಅದಾನಿ, ಅಂಬಾನಿ ಪರ ನಿಲ್ಲುವವರ ಬಗ್ಗೆ ಅರಿತುಕೊಳ್ಳಬೇಕು. ಅವರು ಕಾರ್ಪೋರೆಟ್ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ನಾವು ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ಅರ್ಥ ಮಾಡಿಕೊಳ್ಳಿ, ಅವರ ಮಕ್ಕಳು ವಿದೇಶದಲ್ಲಿ ಓದಿ ಉತ್ತಮ ನೌಕರಿ ಮಾಡುತ್ತಿದ್ದಾರೆ. ದಲಿತ, ಒಬಿಸಿಗಳ ಬಳಿ ಉದ್ಯೋಗ ಇಲ್ಲ. ವ್ಯಾಪಾರ ಇಲ್ಲ. ಎಲ್ಲವೂ ಉಳ್ಳವರ ಬಳಿ ಇದೆ ಎಂದರು.ಎಐಸಿಸಿ ಸಂಯೋಜಕ ಕೆ. ರಾಜು ಮಾತನಾಡಿದರು. ಕಾರ್ಮಿಕ ಸಚಿವ ಸಂತೋಷ್ ಲಾಡ್, ಕ್ರೀಡಾ ಸಚಿವ ಬಿ. ನಾಗೇಂದ್ರ, ಸಂಗೀತ ನಿರ್ದೇಶಕ ಡಾ. ವಿ. ನಾಗೇಂದ್ರ ಪ್ರಸಾದ್, ಶಾಸಕರಾದ ಇ. ತುಕಾರಾಂ, ಬಿ.ಎಂ. ನಾಗರಾಜ, ಜೆ.ಎನ್. ಗಣೇಶ್, ಡಾ. ಎನ್.ಟಿ. ಶ್ರೀನಿವಾಸ್, ಎಂ.ಪಿ. ಲತಾ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಮುಖಂಡರಾದ ಕೆಎಸ್‌ಎಲ್ ಸ್ವಾಮಿ, ಸಿರಾಜ್ ಶೇಕ್, ರಫೀಕ್, ಬಿ.ವಿ. ಶಿವಯೋಗಿ, ಮುಂಡರಗಿ ನಾಗರಾಜ, ಎ. ಮಾನಯ್ಯ, ಅಸುಂಡಿ ನಾಗರಾಜಗೌಡ, ಕುರಿ ಶಿವಮೂರ್ತಿ, ವೆಂಕಟೇಶ ಪ್ರಸಾದ್, ವಿನಾಯಕ ಶೆಟ್ಟರ್, ಸಯ್ಯದ್ ಮೊಹಮದ್, ನಿಂಬಗಲ್ ರಾಮಕೃಷ್ಣ ಮತ್ತಿತರರಿದ್ದರು.