ಸೇವಾಲಾಲ್‍ರ ಆದರ್ಶ ಪಾಲಿಸೋಣ: ತಹಸೀಲ್ದಾರ್ ಗಿರೀಶ್

| Published : Feb 16 2024, 01:49 AM IST

ಸಾರಾಂಶ

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ಗಿರೀಶ್‌ ಪುಷ್ಪ ನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಂತ ಸೇವಾಲಾಲ್‍ರ ಆದರ್ಶ ಮತ್ತು ಸಿದ್ಧಾಂತ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ಜಯಂತಿಗೆ ನಿಜವಾದ ಅರ್ಥ ಕಲ್ಪಿಸಬೇಕಾಗಿದೆ ಎಂದು ತಹಸೀಲ್ದಾರ್ ಗಿರೀಶ್‌ ತಿಳಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಬಂಜಾರ ಸಂಘಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸಂತ ಶ್ರೀ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾನ್ ವ್ಯಕ್ತಿಗಳು ಹಾಗೂ ದಾರ್ಶನಿಕರ ಜೀವನ ಚರಿತ್ರೆ, ಅವರ ತತ್ವ ಮತ್ತು ಆದರ್ಶ ಪ್ರತಿಯೊಬ್ಬರು ತಿಳಿಯಬೇಕೆಂಬ ಉದ್ದೇಶದಿಂದ ಸರ್ಕಾರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸುತ್ತಿದೆ. ಆದರೆ, ಜಯಂತಿಗಳು ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತವಾಗದೆ ಎಲ್ಲರೂ ಸೇರಿ ಆಚರಿಸುವಂತಾಗಬೇಕು. ಆ ಮೂಲಕ ಪ್ರತಿಯೊಬ್ಬರೂ ಕೂಡ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಜೀವನ ಆದರ್ಶ, ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂತ ಸೇವಾಲಾಲ್ ಮಹಾಮಠದ ಗೋಶಾಲಾ ಸಮಿತಿ ಅಧ್ಯಕ್ಷ ಎಂ.ವೈ.ನಾನ್ಯನಾಯ್ಕ್, ಬಂಜಾರ ಸಂಘದ ಜಿಲ್ಲಾ ಉಪಾಧ್ಯಕ್ಷ ಆಯನೂರು ಶಿವನಾಯ್ಕ್, ಪ್ರಧಾನ ಕಾರ್ಯದರ್ಶಿ ಬಿ.ಆರ್ ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಉಮೇಶ್ ಮತ್ತಿತರರು ಇದ್ದರು.