ಕನ್ನಡಪ್ರಭ ವಾರ್ತೆ ಕಾರವಾರ

ಅಸ್ಪೃಶ್ಯತೆ ತೊಡೆದು ಹಾಕಿ ಸಮಾಜದಲ್ಲಿ ಸಮಾನತೆ ತರುವ ಉದ್ದೇಶದಿಂದ ಡಾ. ಬಾಬು ಜಗಜೀವನರಾಮ್ ಜಾರಿಗೆ ತಂದ ಹಲವು ಕಾರ್ಯಕ್ರಮಗಳಲ್ಲಿನ ಸಮಾನತೆಯ ಸಂದೇಶವನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ನಡೆದ ಡಾ. ಬಾಬು ಜಗಜೀವನರಾಮ್ ಅವರ 119ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇಶದ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲ್ಯದಲ್ಲಿಯೇ ಅಸ್ಪೃಶ್ಯತೆ ಅನುಭವಿಸಿ, ಅದರ ವಿರುದ್ಧ ಹೋರಾಟ ಆರಂಭಿಸಿ, ಶಿಕ್ಷಣದ ಮೂಲಕ ದೇಶದ ಉನ್ನತ ಹುದ್ದೆಗಳನ್ನೂ ಅಲಂಕರಿಸಿದ ಡಾ. ಬಾಬು ಜಗಜೀವನರಾಮ್ ಸಮಾನತೆಯ ಹರಿಕಾರರಾಗಿ, ದೇಶದ ಎಲ್ಲಾ ವರ್ಗದ ಹಾಗೂ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ನೀಡುವ ಕಾಯಿದೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ. ಪ್ರಸ್ತುತ ಸಮಾಜದಲ್ಲಿನ ಎಲ್ಲಾ ವರ್ಗದ ವ್ಯಕ್ತಿಗಳು ಕೂಡ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ದೊರೆಯುವಂತೆ ಮತ್ತು ಹಿಂದುಳಿದವರನ್ನು ಮುಂದೆ ತರುವ ಕಾರ್ಯವನ್ನು ಮಾಡುವ ಕಾರ್ಯವನ್ನು ಮಾಡಬೇಕು ಎಂದರು.ಜಿಪಂ ಉಪ ಕಾರ್ಯದರ್ಶಿ ಅಲ್ಲಾ ಭಕ್ಷ್, ಡಾ. ಬಾಬು ಜಗಜೀವನರಾಮ್, ಹಲವು ಕ್ರಾಂತಿಕಾರಿ ಕಾರ್ಯಕ್ರಮಗಳ ಮೂಲಕ ಸಮಾನತೆ ಮತ್ತು ಜಾತ್ಯತೀತತೆಗೆ ಒತ್ತು ನೀಡಿದ್ದು, ಅವರ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದರು.ಡಾ. ಬಾಬು ಜಗಜೀವನರಾಮ್ ಕುರಿತು ಉಪನ್ಯಾಸ ನೀಡಿದ, ಜಿಲ್ಲಾ ಪ.ಜಾತಿ, ಪ.ವರ್ಗಗಳ ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಡಿ. ಮನೋಜ್, ಶಕ್ತಿ ಮತ್ತು ಹೋರಾಟಕ್ಕೆ ಮತ್ತೊಂದು ಹೆಸರೇ ಡಾ. ಬಾಬು ಜಗಜೀವನರಾಮ್, ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಅಸಮಾನತೆಯ ವಿರುದ್ದದ ಹೋರಾಟಕ್ಕೆ ತಮ್ಮ ಇಡೀ ಜೀವನ ಮುಡಿಪಾಗಿಟ್ಟಿದ್ದರು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೈ.ಕೆ. ಉಮೇಶ್, ದಲಿತ ಸಂಘಟನೆಗಳು ಮುಖಂಡರಾದ ದೀಪಕ್ ಕುಡಾಳಕರ, ನಾಗರಾಜ ತಳವಾರ ಇದ್ದರು.

ಸಮಾಜ ಕಲ್ಯಾಣ ಇಲಾಖೆಯ ನಳಿನಿ ಪಟಗಾರ್ ಸ್ವಾಗತಿಸಿದರು, ಪತ್ರಾಂಕಿತ ವ್ಯವಸ್ಥಾಪಕ ನಾಗರಾಜ ನಾಯಕ ವಂದಿಸಿದರು.