ವರ್ಷದ 365 ದಿನವು ಅಂಬೇಡ್ಕರ್ ಬಗೆಗೆ ನಾವು ತಿಳಿದುಕೊಂಡರು ಸಾಲದು ಹಾಗಾಗಿ ಸಂವಿಧಾನದ ಕುರಿತು ಎಲ್ಲರಿಗೂ ತಿಳಿ ಹೇಳಬೇಕು.
ಕನ್ನಡಪ್ರಭ ವಾರ್ತೆ ಹಾಸನ
ಭಾರತ ದೇಶದಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್. ಅಂಬೇಡ್ಕರ್. ಇಂದು ಎಲ್ಲರೂ ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ಸಾಗೋಣ ಎಂದು ಸಂಸದರಾದ ಶ್ರೇಯಸ್ ಎಂ. ಪಟೇಲ್ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿಗಳ ಕಚರಿ ಆವರಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಪರಿ ನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾತನಾಡಿದ ಅವರು ಸಂವಿಧಾನ ಶಿಲ್ಪಿ ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗೆಗೆ ಏನು ಹೇಳಿ ಬಣ್ಣಿಸಿದರು ಕಡಿಮೆಯೇ, ವರ್ಷದ 365 ದಿನವು ಅಂಬೇಡ್ಕರ್ ಬಗೆಗೆ ನಾವು ತಿಳಿದುಕೊಂಡರು ಸಾಲದು ಹಾಗಾಗಿ ಸಂವಿಧಾನದ ಕುರಿತು ಎಲ್ಲರಿಗೂ ತಿಳಿ ಹೇಳಬೇಕು ಎಂದರು.ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ಅಂಬೇಡ್ಕರ್ ಅವರು ಇನ್ನೂ ಸ್ವಲ್ಪ ದಿನಗಳು ನಮ್ಮೊಟ್ಟಿಗೆ ಇರಬೇಕಾಗಿತ್ತು. ನಮ್ಮ ದೇಶಕ್ಕೆ, ಜನತೆಗೆ ಅವರ ಅವಶ್ಯಕತೆ ಬಹಳ ಇತ್ತು. ಅವರು ಜಗತ್ತಿಗೆ, ದೇಶಕ್ಕೆ ನೀಡಿರುವ ಕೊಡುಗೆಗಳನ್ನು ನಾವು ಇಂದು ನೆನಪು ಮಾಡಿಕೊಳ್ಳುತ್ತಿದ್ದೇವೆ ಎಂದರು. ಅಂಬೇಡ್ಕರ್ ಅವರು ಸಂವಿಧಾನದ ಜೀವಾಳ ಎಂದೇ ಹೇಳಬಹುದು. ಎಲ್ಲರು ಇಂದು ಸಮಾನತೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದರೆ ಅದು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಸಮಾನತೆಯಿಂದಾಗಿದೆ. ಇಂದು ಎಲ್ಲರೂ ಅವರಿಗೆ ಗೌರವವನ್ನು ನೀಡುವ ಮೂಲಕ ಪರಿನಿರ್ವಾಣ ದಿನವನ್ನು ಆಚರಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್ ಪೂರ್ಣಿಮಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ದೂದ್ ಫೀರ್, ಸಮುದಾಯದ ಮುಖಂಡರು ಮತ್ತಿತರರು ಭಾಗಿಯಾಗಿದ್ದರು.