ಜಾತಿ ಬೇಧ ಮರೆತು ಸಾಮರಸ್ಯ ಎಂಬ ಹಣತೆ ಹಚ್ಚೋಣ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತಿಳಿಸಿದರು.ಅವರು ಪಟ್ಟಣದ ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಜಾತಿ ಬೇಧ ಮರೆತು ಸಾಮರಸ್ಯ ಎಂಬ ಹಣತೆ ಹಚ್ಚೋಣ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತಿಳಿಸಿದರು.

ಅವರು ಪಟ್ಟಣದ ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸನಾತನ ಎಂದರೆ ಆದಿ ಮತ್ತು ಅಂತ್ಯ ಇಲ್ಲದೇ ಇರುವುದು. ಹಿಂದೂ ಎಂದರೆ ದೇವನೊಬ್ಬ ನಾಮ ಹಲವು ಎಂಬ ನಂಬಿಕೆ ಇರುವವರು. ದೇಶವನ್ನು ನಾನಾ ಹೆಸರುಗಳಿಂದ ಕರೆಯಲ್ಪಟ್ಟರೂ ಭರತನಿಂದ ಬಂದ ಹೆಸರೇ ಭಾರತ. ಸಂಸ್ಕಾರ, ಸತ್ವ, ಸ್ವಾವಲಂಬಿ, ಸ್ವಾಭಿಮಾನಿ, ಸಾಮರಸ್ಯ ಪ್ರತಿಯೊಬ್ಬ ಪ್ರಜೆಯೂ ಮೈಗೂಡಿಸಿಕೊಂಡರೆ ಭಾರತ ವಿಶ‍್ವಗುರುವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ವಿಶ್ವ ಒಂದು ಕುಟುಂಬ ಎಂದು ಬಾವಿಸುವವರು ಹಿಂದೂಗಳು. ಸಂಸ್ಕಾರ ನೀಡುತ್ತಿರುವ ಸಂಘ ವಿಶ್ವಕ್ಕೆ ಮಾದರಿಯಾಗಿದೆ. ಕುಟುಂಬಗಳಲ್ಲಿ ಸಾಮರಸ್ಯ ಬಂದರೆ ದೇಶ ತಾನಾಗಿಯೇ ಒಗ್ಗಟ್ಟಾಗುವುದು, ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸಬೇಕು. ರಾಮಾಯಣ, ಮಹಾಭಾರತ, ವಚನಗಳು ಹಾಗೂ ದಾಸರ ಪದಗಳನ್ನು ಕಲಿಸುವುದರಿಂದ ಮನೆಯೊಂದು ಮೂರು ಬಾಗಿಲು ಆಗುವುದನ್ನು ತಡೆದು ಮನೆತನದ ಪರಂಪರೆಯನ್ನು ಉಳಿಸುವ ಕೆಲಸವಾಗುವುದು. ಜಾತಿ ಒಂದು ಗುರುತು. ಜಾತಿ ಒಳಗೆ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸವಾಗುತ್ತಿದೆ ಎಂದರು.

ವಿವಿಧತೆಯಲ್ಲಿ ಏಕತೆಯನ್ನು ಕಂಡು, ಸಹೋದರತ್ವದ ಭಾವದ ಸಂಬಂಧವಿರಬೇಕು. ಜಮ್ಮು ಕಾಶ್ಮೀರದಲ್ಲಿ ದಂಗೆಯಾದರೆ ನಮಗೆ ಏನು ಸಂಬಂಧ ಎಂಬ ಭಾವನೆಯನ್ನು ಇಟ್ಟುಕೊಳ್ಳಬಾರದು, ಬಸವಣ್ಣ, ಬುದ್ಧ, ಕನಕದಾಸರು ಅಂಬೇಡ್ಕರ್ ಗುಣದ ಕಾರಣಕ್ಕೆ ಶ್ರೇಷ್ಠರಾಗಿದ್ದು, ಪರೋಪಕಾರವೇ ಪುಣ್ಯ, ಪರನಿಂದನೆ ಮಾಡಿದವರಿಗೆ ಪಾಪಿ ಎನ್ನಲಾಗುವುದು. ಸಾಮರಸ್ಯದ ಬಾವವನ್ನು ಗಟ್ಟಿಗೊಳಿಸಬೇಕು ಎಂದರು.

ನಮ್ಮ ದೇಶದಲ್ಲಿ ಸಾಮರ್ಥ್ಯಕ್ಕೆ ಜ್ಞಾನಕ್ಕೆ ಕೊರತೆಯಿಲ್ಲ. ಆದರೂ ಸಹ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದೆವು. ಹಿಂದುತ್ವ ಭಾವನೆ ಒಡೆದು ಜಾತಿಗಳನ್ನು ಹುಟ್ಟಿಹಾಕಿ ಹಿಂದೂ ಧರ್ಮವನ್ನು ಅಂತ್ಯ ಕಾಣಿಸಲು ಹುನ್ನಾರ ನಡೆಯುತ್ತಿದೆ. ಈಗಲೇ ನಾವೆಲ್ಲ ಎಚ್ಚೆತ್ತುಕೊಳ್ಳದಿದ್ದರೆ, ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ ಎಂದರು.

ಅಫಘಾನಿಸ್ತಾನ, ಪಾಕಿಸ್ತಾನ ದೇಶಗಳು ಇರಲಿಲ್ಲ. ಅವು ಹೇಗೆ ನಿರ್ಮಾಣವಾದವು ಎಂಬ ಬಗ್ಗೆ ಮಕ್ಕಳಿಗೆ ಇತಿಹಾಸ ತಿಳಿಸದೇ ಇದ್ದರೆ ದೇಶದ ಹೆಸರು ಬದಲಾವಣೆಯಾಗುವುದರಲ್ಲಿ ಸಂದೇಹವಿಲ್ಲ. ನಾವೆಲ್ಲ ಜಾತಿಯನ್ನು ಬಿಟ್ಟು, ಹಿಂದೂ ಎನ್ನುವ ಏಕ ಮನೋಭಾವನೆ ಬೆಳೆಸಿಕೊಳ್ಳಬೇಕು ಆಗ ಮಾತ್ರ ಸದೃಢ ನಾಡನ್ನು ಕಟ್ಟಲು ಸಾಧ್ಯ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್, ಪಟ್ಟಣದ ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಸುಬ್ರಮಣಿ, ಕೆ.ಪಿ.ಕಿರಣ್ ಕುಮಾರ್, ಯುವರಾಜ್, ಡಾ. ಮಂಜಪ್ಪ, ಸುಧಾಮಣಿ ಬೋರಯ್ಯ, ಎಂ.ಪಾಲಾಕ್ಷಪ್ಪ, ಮಹಾದೇವಪ್ಪ, ತ್ರಿಮೂರ್ತಿ, ಶಿವಕುಮಾರ್ ಕೋಮಾರನಹಳ್ಳಿ, ನಂದ್ಯಪ್ಪ ಸೇರಿದಂತೆ ಇತರರು ಇದ್ದರು.