ಕುಷ್ಟಗಿ ತಾಲೂಕಿನಲ್ಲಿ ಪ್ರತಿಭೆಗಳಿಗೆ ಬರವಿಲ್ಲ, ಪ್ರತಿ ವರ್ಷವೂ ಸಾಧಕರ ಪಟ್ಟಿ ಬೆಳೆಯುತ್ತಲೆ ಇದ್ದು
ಕುಷ್ಟಗಿ: ಸಮಾಜದಲ್ಲಿ ಸಹೋದರತ್ವ ಭಾವನೆಯಿಂದ ಬದುಕು ನಡೆಸುವ ಮೂಲಕ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ಕನಸನ್ನು ಈಡೇರಿಸಬೇಕಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ನಡೆದ 77ನೇ ಗಣರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನವೂ ಸರ್ವಶ್ರೇಷ್ಟವಾಗಿದೆ, ಸಮಾನತೆ, ಸ್ವಾತಂತ್ರ್ಯ ಕೊಟ್ಟಿದ್ದು ಅದರಡಿಯಲ್ಲಿ ಉತ್ತಮ ಬದುಕನ್ನು ಕಟ್ಟಿಕೊಂಡು ಸುಭದ್ರ ಜೀವನ ನಡೆಸೋಣ ಎಂದರು.
ಕುಷ್ಟಗಿ ತಾಲೂಕಿನಲ್ಲಿ ಪ್ರತಿಭೆಗಳಿಗೆ ಬರವಿಲ್ಲ, ಪ್ರತಿ ವರ್ಷವೂ ಸಾಧಕರ ಪಟ್ಟಿ ಬೆಳೆಯುತ್ತಲೆ ಇದ್ದು ಪ್ರಸ್ತುತ ವರ್ಷ ಮಹಾಲಿಂಗಪ್ಪ ದೋಟಿಹಾಳಗೆ ಸಹಕಾರ ರತ್ನ,ಶೇಖರಗೌಡ ಹಾಗೂ ಬಸಪ್ಪ ಚೌಡ್ಕಿ ಇವರಿಬ್ಬರಿಗೆ ರಾಜ್ಯೋತ್ಸವ ಮಂಜುನಾಥ ಮಹಾಲಿಂಗಪೂರಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿಗಳು ಲಭಿಸಿದ್ದು ನಮ್ಮ ತಾಲೂಕಿನ ಗರಿಮೆ ಹೆಚ್ಚಲಿದೆ ಎಂದರು.ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನದ ಆಶಯದಂತೆ ನಾವು ಸಮಾನತೆಯಿಂದ ಭ್ರಾತೃತ್ವ ಭಾವನೆಯಿಂದ ಬದುಕು ನಡೆಸಬೇಕು ಎಂದರು.
ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಯಿಂದ ಗೌರವ ವಂದನೆ ಸಮರ್ಪಣೆ ಕಾರ್ಯಕ್ರಮಗಳು ನಡೆದವು, ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತೀಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಸೇರಿದಂತೆ ಪ್ರಶಸ್ತಿ ವಿತರಣೆ ಕಾರ್ಯಕ್ರಮಗಳು ನಡೆದವು.ಈ ಸಂದರ್ಭದಲ್ಲಿ ಬಿಇಓ ಉಮಾದೇವಿ ಬಸಾಪುರ, ತಾಪಂ ಇಒ ಪಂಪಾಪತಿ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ, ಡಾ. ಆನಂದ ದೇವರನಾವದಗಿ, ವೀರಪ್ಪ, ದೈಹಿಕ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರು, ಪಿಎಸೈ ಹನಮಂತಪ್ಪ ತಳವಾರ,ರವೀಂದ್ರ ಬಾಕಳೆ, ಉಮೇಶ ಯಾದವ, ಬಸವರಾಜ ನೆಲಗಣಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು.
ಎಲ್ಲೆಲ್ಲಿ ಧ್ವಜಾರೋಹಣ: ಪುರಸಭೆ ಕಾರ್ಯಾಲಯ, ಸಂತೆ ಮೈದಾನ, ತಾಪಂ, ಶಾಸಕರ ಕಾರ್ಯಾಲಯ ಸೇರಿದಂತೆ ಅನೇಕ ಶಾಲಾ ಕಚೇರಿಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು.ಮಗುವಿನ ಪ್ರತಿಜ್ಞಾ ವಿಧಿಗೆ ಶಾಸಕರ ಮೆಚ್ಚುಗೆ: ಕುಷ್ಟಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದಿಂದ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಶೈಲ ಸಂಗಮೇಶ ಇಲಚಿ ಎಂಬ 27ನೇ ಅಂಗನವಾಡಿ ಕೇಂದ್ರದ 4 ವರ್ಷದ ಮಗು ಸಂವಿಧಾನದ ಪೂರ್ವಪೀಠಿಕೆ ಓದುವ ಮೂಲಕ ಪ್ರತಿಜ್ಞಾ ವಿಧಿ ಬೋಧಿಸಿದನು. ಇದನ್ನು ಕಂಡ ಶಾಸಕರು ಸೇರಿದಂತೆ ವೇದಿಕೆ ಮೇಲೆ ನೆರೆದಿದ್ದ ಅಧಿಕಾರಿಗಳು ಮಗುವಿನ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.