ಸಾರಾಂಶ
ಪರ್ಕಳ ಸಮೀಪದ ಪರೀಕದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ - ಸೌಖ್ಯವನದಲ್ಲಿ ಸೋಮವಾರ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನು ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಪರ್ಕಳ ಸಮೀಪದ ಪರೀಕದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ - ಸೌಖ್ಯವನದಲ್ಲಿ ಸೋಮವಾರ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಉದ್ಘಾಟಿಸಿ, ಪ್ರಕೃತಿ ಮೂಲದಿಂದ ನಮ್ಮನ್ನು ಉಪಚರಿಸುವ ಹಾಗೂ ಜೀವನ ಶೈಲಿಗೆ ಒತ್ತು ಕೊಡುವ ಔಷಧಿರಹಿತ ವೈದ್ಯಕೀಯ ಪದ್ಧತಿಯಾದ ಪ್ರಕೃತಿ ಚಿಕಿತ್ಸೆಗೆ ಮನ್ನಣೆ ನೀಡೋಣ ಎಂದು ಹೇಳಿದರು.ಅವರನ್ನು ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ ಅವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.ತಪಸ್ಯ ಮಿತ್ರ ಫೌಂಡೇಶನ್ ಸಹ ಸಂಸ್ಥಾಪಕ ಡಾ.ದ್ವಾರಕನಾಥ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ತಮ್ಮದೇ ಜೀವನದ ಅನುಭವಗಳನ್ನು ಹಂಚಿಕೊಂಡು, ಪ್ರಕೃತಿದತ್ತವಾದ ಪಥ್ಯಾಹಾರ ಸೇವನೆಯ ವಿಶೇಷ ಮಾಹಿತಿಯನ್ನು ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ, ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯ ಹಿನ್ನೆಲೆ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಡಾ.ಅಜಿತ್ ನೇತೃತ್ವದಲ್ಲಿ ಕಿರಿಯ ವೈದ್ಯರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯೋಗ ಪ್ರಾತ್ಯಕ್ಷಿತೆ ನಡೆಯಿತು. ಸಂಸ್ಥೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಶೋಭಿತ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಸಲ್ಲಿಸಿದರು. ಡಾ. ಪೂಜಾ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಡಾ. ಅನ್ವಿತ ಯು. ವಂದಿಸಿದರು.